Bengaluru: ಬೆಂಗಳೂರಿನಲ್ಲಿ 694 ಕೋಟಿ ರೂ. ಮೊತ್ತದ ಅಭಿವೃದ್ದಿ ಕಾಮಗಾರಿ: ಹೊಸ ಡೆಡ್‌ಲೈನ್
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪ್ರಮುಖ ಯೋಜನೆಗೆ ಡೆಡ್‌ಲೈನ್ ನಿಗದಿ ಮಾಡಲಾಗಿದೆ. ಬೆಂಗಳೂರಿನ 694 ಕೋಟಿ ರೂಪಾಯಿ ಪ್ಯಾಕೇಜ್ ಅಡಿ ಬಾಕಿ ಇರುವ ಎಲ್ಲಾ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಒಂದು ತಿಂಗಳಿನಲ್ಲಿ ಪೂರ್ಣಗೊಳಿಸಲು ಡೆಡ್‌ಲೈನ್ ನಿಗದಿ ಮಾಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರಿನ ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ಭೇಟಿ ನೀಡಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲನೆ ನಡೆಸಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು 1 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.

694 ಕೋಟಿ ರೂಪಾಯಿ ಪ್ಯಾಕೇಜ್
ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ 694 ಕೋಟಿ ರೂಪಾಯಿ ಪ್ಯಾಕೇಜ್ ಅಡಿಯಲ್ಲಿ ಕೈಗೊಳ್ಳುತ್ತಿರುವ ಹೊರಮಾವು - ಅಗರ ಮುಖ್ಯರಸ್ತೆ, ಹೊರಮಾವು - ಕಲ್ಕೆರೆ ಮುಖ್ಯರಸ್ತೆ, ರಾಮಮೂರ್ತಿನಗರ - ಕಲ್ಕೆರೆ ಮುಖ್ಯರಸ್ತೆ, ಕಲ್ಕೆರೆ - ಚನ್ನಸಂದ್ರ ಮುಖ್ಯರಸ್ತೆ, ವಡ್ಡರಪಾಳ್ಯ ಮುಖ್ಯರಸ್ತೆ ಹಾಗೂ ಇನ್ನುಳಿದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಆಯುಕ್ತರು, ಬಾಕಿಯಿರುವ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ಒಂದು ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.
ವಡ್ಡರಪಾಳ್ಯ ಮುಖ್ಯರಸ್ತೆ ಕಾಮಗಾರಿಗೆ ಡೆಡ್‌ಲೈನ್
ಇನ್ನು ಇಲ್ಲಿನ ವಡ್ಡರಪಾಳ್ಯ ಮುಖ್ಯರಸ್ತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಂಡಿರುವ ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ ಒಳಚರಂಡಿ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬಿಡಬ್ಲ್ಯೂಎಸ್ಎಸ್‌ಬಿ ಕಾಮಗಾರಿ ಮುಗಿದ ತಕ್ಷಣವೇ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಕಸ್ತೂರಿನಗರದಲ್ಲಿ ಕೆಂಪೇಗೌಡ ಕೆಳಸೇತುವೆಯಿಂದ - ಬೆನ್ನಿಗಾನಹಳ್ಳಿ ಕೆರೆಯವರೆಗೂ ಕೈಗೊಂಡಿರುವ ಬೃಹತ್ ಮಳೆ ನೀರು ಕಾಲುವೆ ತಡೆಗೋಡೆ ಕಾಮಗಾರಿಯನ್ನು ಪರಿಶೀಲಿಸಿದ ಆಯುಕ್ತರು ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ. ಅಲ್ಲದೇ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುತ್ತಿದ್ದು, ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಬೆಂಗಳೂರಿನ ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್.ರಮೇಶ್ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಎಂಜಿನಿಯರರಾದ ಕೃಷ್ಣಮೂರ್ತಿ, ಕಾರ್ಯಪಾಲಕ ಎಂಜಿನಿಯರರು, ಸಹಾಯಕ ಕಾರ್ಯಪಾಲಕ ಎಂಜಿನಿಯರರು ಮತ್ತು ಗುತ್ತಿಗೆದಾರರು ಸೇರಿದಂತೆ ಹಲವರು ಇದ್ದರು.












Click it and Unblock the Notifications