ಬೆಂಗಳೂರು : ಕಾಮಾಕ್ಯದಲ್ಲಿ ಒಂಟಿ ವೃದ್ಧನ ಕೊಲೆ
ಬೆಂಗಳೂರು, ಆ.19 : ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧನನ್ನು ಕೊಲೆ ಮಾಡಿ ಹಣ ಮತ್ತು ಒಡವೆ ದೋಚಿರುವ ಘಟನೆ ಬೆಂಗಳೂರಿನ ಕಾಮಾಕ್ಯದಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಕೊಲೆಯಾದ ವೃದ್ಧರನ್ನು ನರಸಿಂಹನ್ ಐಯ್ಯಂಗಾರ್ (60) ಎಂದು ಗುರತಿಸಲಾಗಿದೆ. ಮಂಗಳವಾರ ಬೆಳಗ್ಗೆ ಮನೆಯಲ್ಲಿ ನರಸಿಂಹನ್ ಮೃತದೇಹ ಪತ್ತೆಯಾಗಿದೆ. ಎರಡು ವರ್ಷಗಳಿಂದ ಐಯ್ಯಾಂಗಾರ್ ಈ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಖಾಸಗಿ ಕಂಪೆನಿ ನಡೆಸುತ್ತಿದ್ದ ಇವರು ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ರಿಯಲ್‍ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇವರ ಮಕ್ಕಳು ವಿದೇಶದಲ್ಲಿ ನೆಲೆಸಿದ್ದು ಐಯ್ಯಂಗಾರ್‌ವೊಬ್ಬರೇ ಬೆಂಗಳೂರಿನಲ್ಲಿ ವಾಸವಾಗಿದ್ದರು. ಸೋಮವಾರ ತಡರಾತ್ರಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. [ರೌಡಿ ಶೀಟರ್ ಮೇಲೆ ಗುಂಡಿನ ದಾಳಿ]
ಐಯ್ಯಂಗಾರ್ ಕೊಲೆ ಬಳಿಕ ಮನೆಯಲ್ಲಿದ್ದ ಹಣ, ಬೆಳ್ಳಿಯ ಒಡೆವೆ ಮತ್ತು ನರಸಿಂಹನ್ ಅವರ ಎರಡು ಎಟಿಎಂ ಕಾರ್ಡ್‌ಗಳನ್ನು ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.












Click it and Unblock the Notifications