50% ರಿಯಾಯಿತಿ: 6 ದಿನದಲ್ಲಿ 50 ಕೋಟಿಗೂ ಅಧಿಕ ಟ್ರಾಫಿಕ್ ದಂಡ ಸಂಗ್ರಹಿಸಿದ ಸಂಚಾರಿ ಪೊಲೀಸರು
ಬುಧವಾರ ರಾತ್ರಿ 8 ಗಂಟೆಯ ವೇಳೆಗೆ 9,06,94,800 ರೂಪಾಯಿ ಸಂಗ್ರಹವಾಗಿದ್ದು, ಒಟ್ಟು 3,23,629 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತೆರವುಗೊಳಿಸಲಾಗಿದೆ.
ಬೆಂಗಳೂರು, ಫೆಬ್ರವರಿ. 09: ರಾಜ್ಯ ಸರ್ಕಾರವು ಎಲ್ಲಾ ಬಾಕಿ ಇರುವ ಟ್ರಾಫಿಕ್ ದಂಡಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ಘೋಷಿಸಿದ ನಂತರ ದಂಡ ಕಟ್ಟುವವರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ.
50 ರಷ್ಟು ರಿಯಾಯಿತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೇವಲ ಆರು ದಿನಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಬರೋಬ್ಬರಿ 50 ಕೋಟಿಗೂ ಅಧಿಕ ಟ್ರಾಫಿಕ್ ದಂಡ ಸಂಗ್ರಹಿಸಿದ್ದಾರೆ.
ಕಳೆದ ಆರು ದಿನಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) ಬುಧವಾರ ರಾತ್ರಿ 8 ಗಂಟೆಯ ವೇಳೆಗೆ ಒಟ್ಟು 51,85,40,531 ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ.

ಬುಧವಾರ ರಾತ್ರಿ 8 ಗಂಟೆಯ ವೇಳೆಗೆ 9,06,94,800 ರೂಪಾಯಿ ಸಂಗ್ರಹವಾಗಿದ್ದು, ಒಟ್ಟು 3,23,629 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತೆರವುಗೊಳಿಸಲಾಗಿದೆ ಎಂದು ಟ್ರಾಫಿಕ್ ಪೊಲೀಸ್ ಇಲಾಖೆಯ ಅಂಕಿಅಂಶಗಳು ತೋರಿಸಿವೆ.
ವಿವಿಧ ಪೊಲೀಸ್ ಠಾಣೆಗಳಲ್ಲಿ ವೈಯಕ್ತಿಕ ಡಿಜಿಟಲ್ ಪೇಮೆಂಟ್ ಸಹಾಯದ ಮೂಲಕ ಸುಮಾರು 1,59,964 ಪ್ರಕರಣಗಳನ್ನು ತೆರವುಗೊಳಿಸಲಾಗಿದ್ದು, 4,36,58,900 ರೂಪಾಯಿ ಸಂಗ್ರಹಿಸಲಾಗಿದೆ. ಇನ್ನು, ಪೇಟಿಎಂ ಮೂಲಕ 3,59,66,950 ರೂಪಾಯಿ ಪಾವತಿಸಲಾಗಿದ್ದು, 1,20,590 ಪ್ರಕರಣಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಬೆಂಗಳೂರು ಒನ್ ಮೂಲಕ 1,09,83,500 ರೂಪಾಯಿಗಳನ್ನು ಪಾವತಿಸಲಾಗಿದ್ದು, ಇಲ್ಲಿಂದ ಸುಮಾರು 42,710 ಪ್ರಕರಣಗಳನ್ನು ತೆರವುಗೊಳಿಸಲಾಗಿದೆ. ಇನ್‌ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ 365 ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ತೆರವುಗೊಳಿಸಲಾಗಿದ್ದು, 85,450 ರೂಪಾಯಿಗಳನ್ನು ಸಂಗ್ರಹಿಸಲಾಗಿದೆ.
ಕಳೆದ ಶುಕ್ರವಾರದಿಂದ ಒಟ್ಟು 18,26,060 ಪ್ರಕರಣಗಳನ್ನು ತೆರವುಗೊಳಿಸಿಸಿದ್ದು, ಬರೋಬ್ಬರಿ ಒಟ್ಟು 51,85,40,531 ರೂಪಾಯಿ ಸಂಗ್ರಹವಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅಧ್ಯಕ್ಷತೆಯಲ್ಲಿ ಕಳೆದ ಜನವರಿ 27ರಂದು ನಡೆದ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿತ್ತು. ನಂತರ ಕಾನೂನು ಸೇವೆಗಳ ಪ್ರಾಧಿಕಾರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ ರಿಯಾಯಿತಿ ಸರಕಾರ ಶೇ.50ರಷ್ಟು ರಿಯಾಯಿತಿ ನೀಡಲು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ದಂಡದ ಮೊತ್ತ ಬಾಕಿ ಉಳಿಸಿಕೊಂಡಿರುವವರು ಫೆಬ್ರವರಿ 11ರೊಳಗೆ ದಂಡ ಕಟ್ಟಿದರೆ ಅಂತಹವರು ರಿಯಾಯಿತಿ ಪಡೆಯಬಹುದಾಗಿದೆ. ಫೆ.11ರ ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್ ಹಿನ್ನೆಲೆಯಲ್ಲಿ ಈ ರಿಯಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.












Click it and Unblock the Notifications