ಬೆಂಗಳೂರು ವಾಯುಮಾಲಿನ್ಯ: ಶೇ.50ರಷ್ಟು ರಸ್ತೆ ಧೂಳು ಕಾರಣ..!
ಬೆಂಗಳೂರು, ಮೇ 5: ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಕರೆಸಿಕೊಳ್ಳುವ ನಮ್ಮ ಬೆಂಗಳೂರಿನ ವಾಯುಮಾಲಿನ್ಯದಲ್ಲಿ ಶೇ.25 ರಿಂದ 50 ರಷ್ಟು ಭಾಗ ರಸ್ತೆ ಧೂಳು ಮತ್ತು ಕಳಪೆ ರಸ್ತೆ ಕಾಮಗಾರಿಗಳೇ ಕಾರಣ ಎಂದು ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಆಫ್ ಪಾಲಿಸಿ (CSTEP) ಅಧ್ಯನ ಕೇಂದ್ರವೊಂದು ತಿಳಿಸಿದೆ.
ರಾಷ್ಟ್ರೀಯ ಶುದ್ಧ ಗಾಳಿ ಯೋಜನೆ ಮೂಲಕ 2019 ರಿಂದ 2020ರ ವರೆಗೆ ಸುಮಾರು122 ನಗರಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲೂ ಬೆಂಗಳೂರಿನ 32 ಸ್ಥಳಗಳಲ್ಲಿ ಈ ಸಮೀಕ್ಷೆ ವ್ಯಾಪಕವಾಗಿ ನಡೆಸಿದ್ದು, ಬಹುತೇಕ ಪ್ರದೇಶಗಳು ರಸ್ತೆ ದೂಳಿನಿಂದ, ವೈಟ್ ಟಾಪಿಂಗ್ ನಂತಹ ಕಾಮಗಾರಿಗಳಿಂದಲೇ ವಾಯುಮಾಲಿನ್ಯವಾಗಿ ಪಾದಚಾರಿಗಳಿಗೆ, ವಾಹನ ಸವಾರರ ಶ್ವಾಸಕೋಶಕ್ಕೆ ರಸ್ತೆ ದೂಳು ಪರಿಣಾಮ ಬೀರುತ್ತಿದೆ ಎಂದು ತಿಳಿಸಿದೆ.

ಲಾರಿಗಳ ಓಡಾಟದಿಂದ ವಿಪರೀತ ಧೂಳು
ನಗರದಲ್ಲಿ ವಾಯುಮಾಲಿನ್ಯ ತಡೆಗೆ ಎಲೆಕ್ಟ್ರಿಕ್ ವಾಹನಗಳು, ಬಸ್ ಗಳು ರಸ್ತೆಗೆ ಇಳಿದಿದ್ದರೂ ಸಾರಿಗೆ ಸಂಚಾರ ವಲಯದಿಂದ ಬೀರುತ್ತಿದ್ದ ಶೇ.20% ರಿಂದ 40% ವಾಯುಮಾಲಿನ್ಯ ಶೂನ್ಯ ಪ್ರಮಾಣದಲ್ಲಿ ಕಡಿಮೆ ಇದೆ. ಎಲ್ಲಿ ನೋಡಿದ್ರೂ ರಸ್ತೆ ಗುಂಡಿಗಳು, ರಸ್ತೆ ಕಾಮಗಾರಿ ಹಾಗೂ ಕಟ್ಟಡಗಳು ಬಹಳ ವೇಗವಾಗಿ ತಲೆ ಎತ್ತುತ್ತಿವೆ. ಇದರ ಪರಿಣಾಮ ಸಿಟಿ ಹೊರವಲಯ ಕ್ರಷರ್ ಗಳಿಂದ ಬರುವ ಲಾರಿಗಳ ಓಡಾಟ, ರಸ್ತೆಯಲ್ಲಿ ವಿಪರೀತ ಧೂಳು, ಕಳಪೆ ರಸ್ತೆ ಕಾಮಗಾರಿ ಹೆಚ್ಚಾಗಿ ಕಾರಣವಾಗಿದೆ. ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಆಫ್ ಪಾಲಿಸಿ (CSTEP) ಅಧ್ಯಯನ ಕೇಂದ್ರ 2019 ರಿಂದ ನಡೆಸಿದ ಸಮೀಕ್ಷೆಯ ಪ್ರಕಾರ 2019 ರಲ್ಲಿ ಸುಮಾರು 24,600 ಟನ್ ಪಿಎಂ 10 ಮತ್ತು 14,700 ಟನ್ ಪಿಎಂ 2.5 ಅನ್ನು ಬಿಬಿಎಂಪಿ ಪ್ರದೇಶದಿಂದ ಹೊರಸೂಸಲಾಗಿದೆ ಎಂದು ತಿಳಿಸಲಾಗಿದೆ.

ಹೃದಯ ತೊಂದರೆ, ಪಾರ್ಶ್ವವಾಯು ಸಾಧ್ಯತೆ
ಈ ಹಿಂದೆ ಅಂದರೆ 2010 ರಲ್ಲಿ ಎನರ್ಜಿ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ ವರದಿ ಮಾಡಿದ ಪ್ರಕಾರ PM10 ಲೋಡ್ ಅನ್ನು 19,856 ಟನ್‌ಗಳಲ್ಲಿ ಅಳೆಯಲಾಗಿತ್ತು. ರಾಷ್ಟ್ರೀಯ ಮಾದರಿಗಳು ಈಗಾಗಲೇ PM2.5 ಮಟ್ಟವನ್ನು ಅಂದಾಜಿಸಲಾಗಿದ್ದು, ರಸ್ತೆ ದೂಳು ಮನುಷ್ಯನ ರಕ್ತ ನಾಳಗಳಿಗೆ ಸೇರುವ ಮೂಲಕ ಶ್ವಾಸಕೋಶ ಮತ್ತು ಹೃದಯ ಕಾಯಿಲೆಗಳು, ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ನಂತಹ ಖಾಯಿಲೆ ಹೆಚ್ಚಿಸುವ ಸಾಮರ್ಥ್ಯ ಹೆಚ್ಚಾಗಿರುತ್ತದೆ ಎಂದು ಈ ಸಂಶೋಧನಾ ಸಂಸ್ಥೆಗಳು ಎಚ್ಚರಿಕೆಯ ವರದಿಗಳನ್ನ ನೀಡಿವೆ.

ಯಾವ ಭಾಗಗಳಿಂದ ಹೆಚ್ಚು ವಾಯುಮಾಲಿನ್ಯ ಆಗುತ್ತಿದೆ..?
ಈ ಸಂಶೋಧನೆಯು ಮಾಲಿನ್ಯಕಾರಕ ಕಣಗಳ ಮೂಲಗಳನ್ನು ಗುರುತಿಸಿದ್ದು, ಯಾವ್ಯಾವ ಭಾಗಗಳಿಂದ ಎಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯಕ್ಕೆ ಆಗಿತ್ತಿದೆ ಎಂದ ವರದಿಯನ್ನೂ ಸಹ ನೀಡಿದೆ. ಅವುಗಳಲ್ಲಿ ಸಾರಿಗೆಯು PM2.5 ನ ಮುಖ್ಯ ಕೊಡುಗೆಯಾಗಿ (39.9%) ಗುರುತಿಸಲ್ಪಟ್ಟಿದೆ. ಧೂಳು (25.3%) ಮತ್ತು ದ್ವಿತೀಯ ಸಲ್ಫೇಟ್ (13.2%) ಕಲ್ಲಿದ್ದಲು, ಮರ ಸುಡುವಿಕೆ ಮತ್ತು ಕೈಗಾರಿಕಾ ಹೊರಸೂಸುವಿಕೆಗಳಿಂದ ಕೂಡಿದೆ. ಇನ್ನೂ ದೊಡ್ಡ ಕಣಗಳ ಪೈಕಿ (PM10) ವಿಷಯಕ್ಕೆ ಬಂದಾಗ, ಮಣ್ಣು ಮತ್ತು ರಸ್ತೆಯ ಧೂಳು 51.1% ಮಾಲಿನ್ಯದಿಂದ ಕೂಡಿದೆ.

ಬಿಬಿಎಂಪಿ ಈ ಬಗ್ಗೆ ಅಧ್ಯಯನ ಮಾಡಬೇಕು
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ (CSTEP) ಸಂಶೋಧನಾ ವಿಜ್ಞಾನಿ ಮತ್ತು ಅಧ್ಯಯನದ ಲೇಖಕ ಪ್ರತಿಮಾ ಸಿಂಗ್, "ಇತ್ತೀಚಿಗೆ ಜನರು ಎಲೆಕ್ಟ್ರಿಕ್ ವಾಹನಗಳಿಗೆ ನೀಡುತ್ತಿರುವ ಪ್ರಾಮುಖ್ಯತೆ ಈ ವಾಯು ಮಾಲಿನ್ಯ ತಡೆಗೆ ಸರಿಯಾದ ಕ್ರಮ ಆಗಿದೆ. ನಗರದ ಮುಖ್ಯ ರಸ್ತೆಗಳಲ್ಲಿ ವೈಟ್ ಟಾಪ್ಪಿಂಗ್ ನಂತಹ ಹೊಸ ರಸ್ತೆ ಮೂಲಸೌಕರ್ಯಗಳಿಗೆ ನೀಡುತ್ತಿರುವ ಪ್ರಾಮುಖ್ಯತೆ ಒಳ್ಳೆಯದು. ಆದರೆ ಅತೀ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಂತಹ ನಗರದಲ್ಲಿ ಧೂಳು ಸಮಸ್ಯೆ ಕಾಡುತ್ತಲೇ ಇರುತ್ತದೆ,'' ಎಂದು ಅವರು ತಿಳಿಸಿದ್ದಾರೆ.
"ಪಾದಚಾರಿ ಮಾರ್ಗಗಳಲ್ಲಿ, ಸಿಸಿ ರಸ್ತೆಗಳಲ್ಲಿ ಹೀಗೆ ವಿಭಿನ್ನ ರಸ್ತೆಗಳಲ್ಲಿ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ಹೊರಸೂಸುವಿಕೆಯನ್ನು ಪರಿಗಣಿಸುವ ಸಾರಿಗೆ-ನಿರ್ದಿಷ್ಟ ವಾಹನ ಓಡಾಟ ಮಾದರಿಯನ್ನು ಅಭಿವೃದ್ಧಿಪಡಿಸಬೇಕು. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಈ ಅಧ್ಯಯನದಿಂದ ಸಾಧ್ಯವಾದರೆ ತಮ್ಮ ಇಲಾಖೆಗಳ ಮುಖಾಂತರ ಉತ್ತಮ ಅನುಷ್ಠಾನ ತಂತ್ರವನ್ನು ರೂಪಿಸಿಕೊಳ್ಳಲು ಆಸಕ್ತರಾದರೆ ವಾಯುಮಾಲಿನ್ಯ ತಡೆಗೆ ಸಹಕಾರಿಯಾಗುತ್ತದೆ,'' ಎಂದು ಪ್ರತಿಮಾ ಸಿಂಗ್ ಹೇಳಿದ್ದಾರೆ.












Click it and Unblock the Notifications