ಹೊಸ ದಾಖಲೆ: ಬೆಂಗಳೂರಿನಲ್ಲಿ ಶೇ.50ರಷ್ಟು ಜನರಿಗೆ ಕೊರೊನಾವೈರಸ್ ಲಸಿಕೆ
ಬೆಂಗಳೂರು, ಮೇ 28: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಒಂದು ಕಡೆ ಇಳಿಮುಖವಾಗುತ್ತಿದ್ದರೆ ಇನ್ನೊಂದು ದಿಕ್ಕಿನಲ್ಲಿ ಲಸಿಕೆ ವಿತರಣೆ ವೇಗ ಹೆಚ್ಚುತ್ತಿದೆ. ಬೆಂಗಳೂರಿನ ಒಟ್ಟು ಜನಸಂಖ್ಯೆಯಲ್ಲಿ ಅರ್ಹ ಫಲಾನುಭವಿಗಳ ಪೈಕಿ ಶೇ.50ರಷ್ಟು ಜನರಿಗೆ ಕೊವಿಡ್-19 ಲಸಿಕೆಯ ಮೊದಲ ಡೋಸ್ ನೀಡಲಾಗಿದೆ.
ರಾಜ್ಯದಲ್ಲೇ ಅತಿಹೆಚ್ಚು ಕೊವಿಡ್-19 ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಸಿಲಿಕಾನ್ ಸಿಟಿ ಇದೀಗ ಲಸಿಕೆ ವಿತರಣೆಯಲ್ಲೂ ದಾಖಲೆ ಬರೆದಿದೆ. ಬೆಂಗಳೂರಿನಲ್ಲಿ ಈವರೆಗೂ 60 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ 99 ಲಕ್ಷ ಮಂದಿ ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳುವುದಕ್ಕೆ ಅರ್ಹರಾಗಿದ್ದು, ಈ ಪೈಕಿ 60 ಲಕ್ಷ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ.

ಕೊವಿಡ್-19 ಲಸಿಕೆ ವಿತರಿಸುವಲ್ಲಿ ದಾಖಲೆ ಬರೆದ ಬೆಂಗಳೂರು
"ಬೆಂಗಳೂರಿನಲ್ಲಿ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ಇಡೀ ದೇಶದ ಯಾವುದೇ ನಗರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿಲ್ಲ. ರಾಜ್ಯದಲ್ಲಿ ಮೊದಲನೇ ಡೋಸ್ ಪಡೆದವರ ಪ್ರಮಾಣ ಶೇ.40ರಷ್ಟಿದೆ (1.85 ಕೋಟಿ). 45 ಲಕ್ಷಕ್ಕೂ ಹೆಚ್ಚು ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಲಸಿಕೆ ನೀಡಲು ಆದ್ಯತೆಯಲ್ಲಿ ಕೆಲ ಗುಂಪುಗಳನ್ನು ರಚಿಸಲಾಗಿದೆ.

ಕೆಲವು ಗುಂಪುಗಳಿಗೆ ಲಸಿಕೆ ವಿತರಣೆಯಲ್ಲಿ ಆದ್ಯತೆ
"ಕರ್ನಾಟಕದಲ್ಲಿ ಕೊರೊನಾವೈರಸ್ ಲಸಿಕೆ ವಿತರಿಸುವುದಕ್ಕೆ ಕೆಲವು ಆದ್ಯತಾ ಗುಂಪುಗಳನ್ನು ರಚಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿಯ ಕುಟುಂಬದವರು, ಪೊಲೀಸರ ಕುಟುಂಬದವರು, ಮಾಧ್ಯಮದವರು ಸೇರಿದಂತೆ ಕೊವಿಡ್-19 ವಿರುದ್ಧ ಹೋರಾಡುತ್ತಿರುವವರು ಹಾಗೂ ಹೆಚ್ಚು ಜನಸಂಪರ್ಕದಲ್ಲಿ ಇರುವವರಿಗೆ ಲಸಿಕೆ ನೀಡುವಲ್ಲಿ ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು ಎಂದು," ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ನೆರೆ ರಾಜ್ಯಗಳಿಂದ ಆಗಮಿಸುವವರ ವೈದ್ಯಕೀಯ ತಪಾಸಣೆ
ಕರ್ನಾಟಕಕ್ಕೆ ನೆರೆ ರಾಜ್ಯಗಳಿಂದ ಆಗಮಿಸುವ ಎಲ್ಲ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅದಾಗ್ಯೂ, ಸಾಧ್ಯವಾದಷ್ಟು ಜನರಿಗೆ ಕೊವಿಡ್-19 ಪರೀಕ್ಷೆ ಮಾಡಲಾಗುತ್ತಿದೆ. ಕೇರಳ ರಾಜ್ಯವೊಂದರಿಂದಲೇ ಲಕ್ಷಾಂತರ ಜನರು ರಾಜ್ಯಕ್ಕೆ ಆಗಮಿಸುತ್ತಿದ್ದು, ಅದನ್ನು ಗಂಭೀರವಾಗಿ ತೆಗೆದುಕೊಂಡು ಪರೀಕ್ಷೆ ನಡೆಸಲಾಗುತ್ತಿದೆ," ಎಂದು," ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ಮುಂದಿನ 30 ದಿನಗಳಲ್ಲಿ ಶೇ.75ರಷ್ಟು ಫಲಾನುಭವಿಗಳಿಗೆ ಲಸಿಕೆ
"ಕೊರೊನಾವೈರಸ್ ಲಸಿಕೆಯನ್ನು ಹೆಚ್ಚು ಹೆಚ್ಚು ಜನರು ಪಡೆದುಕೊಂಡಷ್ಟು ಮುಂದಿನ ಅಪಾಯದಿಂದ ರಕ್ಷಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಲಸಿಕೆ ವಿತರಣೆ ವೇಗ ಹೆಚ್ಚಿದಂತೆ ಜನರಲ್ಲಿನ ಆತಂಕದ ಪ್ರಮಾಣ ಕಡಿಮೆ ಆಗುತ್ತದೆ. ಮುಂದಿನ ಅಲೆಯನ್ನು ಎದುರು ನೋಡುವ ಬದಲಿಗೆ ಹೆಚ್ಚು ಹೆಚ್ಚು ಲಸಿಕೆ ವಿತರಣೆಯತ್ತ ಲಕ್ಷ್ಯ ವಹಿಸಬೇಕಿದೆ. ಮುಂದಿನ 30 ದಿನಗಳಲ್ಲಿ ಬೆಂಗಳೂರಿನಲ್ಲಿ ಶೇ.75ರಷ್ಟು ಮಂದಿ ಅರ್ಹ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗುತ್ತದೆ, ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.

30 ದಿನಗಳಲ್ಲಿ 25 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ
"ಕಳೆದ ಏಪ್ರಿಲ್ 20 ರಿಂದ ಮೇ 20ರವರೆಗಿನ ಅವಧಿಯಲ್ಲಿ ಕೊವಿಡ್-19 ಲಸಿಕೆ ಪೂರೈಕೆ ಕೊರತೆಯಿದ್ದ ಹಿನ್ನೆಲೆ ಲಸಿಕೆ ವಿತರಣೆ ವೇಗವು ನಿಧಾನಗತಿಯಲ್ಲಿತ್ತು. ಆದರೆ ಇದೀಗ ಲಸಿಕೆ ಪೂರೈಕೆ ಹಾದಿ ಸುಗಮವಾಗಿದ್ದು, ಮುಂದಿನ 30 ದಿನಗಳಲ್ಲಿ 25 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದೇವೆ. ಅಪಾರ್ಟ್ ಮೆಂಟ್ ಮತ್ತು ಕೆಲಸದ ಕಚೇರಿಗಳು ಸೇರಿದಂತೆ ಹಲವೆಡೆ ವಿಶೇಷ ಶಿಬಿರಗಳನ್ನು ಆಯೋಜಿಸುತ್ತೇವೆ. ಆ ಮೂಲಕ ಬೆಂಗಳೂರಿನಲ್ಲಿ ಫಲಾನುಭವಿಗಳಿಗೆ ಲಸಿಕೆಯನ್ನು ವಿತರಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸುತ್ತೇವೆ," ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾಹಿತಿ ಹೇಳಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ
ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ 800ಕ್ಕಿಂತ ಕಡಿಮೆಯಾಗಿದೆ. ಕಳೆದ ಒಂದು ದಿನದಲ್ಲಿ 788 ಮಂದಿಗೆ ಕೊವಿಡ್-19 ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 12,11,430ಕ್ಕೆ ಏರಿಕೆಯಾಗಿದೆ. 11 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 15,581ಕ್ಕೆ ಏರಿಕೆಯಾಗಿದೆ.
Recommended Video

ಯಾವ ಹಂತದಲ್ಲಿ ಎಷ್ಟು ಫಲಾನುಭವಿಗಳಿಗೆ ಲಸಿಕೆ?
ರಾಜ್ಯದಲ್ಲಿ ಮೇ 1ರಿಂದ ಈವರೆಗೂ 58,26,150 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ಮೊದಲ ಡೋಸ್ ನೀಡಲಾಗಿದ್ದು, 74,625 ಜನರಿಗೆ 2ನೇ ಡೋಸ್ ಲಸಿಕೆ ವಿತರಿಸಲಾಗಿದೆ. ರಾಜ್ಯದಲ್ಲಿ ಈವರೆಗೂ 7,49,217 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 4,98,336 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 8,19,659 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 2,48,130 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,07,79,466 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 27,30,180 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.












Click it and Unblock the Notifications