ಬೆಂಗಳೂರಲ್ಲಿ 47 ಕಿ.ಮೀ ಉದ್ದದ ಪ್ರಮುಖ ಕಾಮಗಾರಿ ಬಗ್ಗೆ ಬಿಗ್ ಅಪ್ಡೇಟ್ಸ್
ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಂಚಾರ ಯುಕ್ತ ಯೋಜನೆಯಡಿ 47 ಕಿ.ಮೀ ಉದ್ದದ ಬಫರ್ ರಸ್ತೆಗಳ ಕಾಮಗಾರಿಯನ್ನು ಈ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಪ್ರಾರಂಭಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ವಿವಿಧ ಇಲಾಖೆಗಳಿಂದ ನಡೆಯುವ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳ ಕುರಿತು ಶುಕ್ರವಾರ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಹೆಚ್ಚುವರಿ ರಸ್ತೆಗಳನ್ನು ಒದಗಿಸಲು, ಕಾಲುವೆಗಳನ್ನು ರಕ್ಷಿಸಲು, ಬಫರ್ ವಲಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು, ಸುಸ್ಥಿರ ಸಾರಿಗೆಯನ್ನು ಉತ್ತೇಜಿಸಲು ಹಾಗೂ ನೆರೆಹೊರೆಯ ರಸ್ತೆಗಳನ್ನು ಬಲಪಡಿಸಲು ಸುಮಾರು 300 ಕಿ.ಮೀ ಉದ್ದದ ಬಫರ್ ರಸ್ತೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.

ಮುಂದುವರಿದು ಈ ಪೈಕಿ 47 ಕಿ.ಮೀ ಉದ್ದದ ರಸ್ತೆಗಳಿಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಪೂರ್ಣ ಗೊಳಿಸಲಾಗಿದ್ದು, ಗುತ್ತಿಗೆದಾರರಿಗೆ ಕಾರ್ಯ ಆದೇಶ ನೀಡುವ ಮೂಲಕ ಕೂಡಲೇ ಕಾಮಗಾರಿ ಪ್ರಾರಂಭಿಸಲು ನಿರ್ದೇಶನ ನೀಡಲಾಗಿದೆ. ಬಫರ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ, ಪಾಲಿಕೆವಾರು ರಸ್ತೆಗಳ ಮತ್ತು ಸ್ವತ್ತು/ಸರ್ವೇ ಮಾಹಿತಿಯನ್ನು ಆಯುಕ್ತರಿಗೆ ಸಲ್ಲಿಸಬೇಕು.
ನಂತರ ವಿನ್ಯಾಸ ಪರಿಶೀಲನೆ ನಡೆಸಿ, ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಖಾಸಗಿ ಜಾಗಗಳು ಬೇಕಾದಲ್ಲಿ ಟಿಡಿಆರ್/ಪ್ರೀಮಿಯಂ ಎಫ್.ಎ.ಆರ್ ನೀಡುವ (ಅಭಿವೃದ್ಧಿ ಜಾಗ ಅಥವಾ ಜಾಗಕ್ಕೆ ಪರ್ಯಾಯ ಭೂಮಿ) ಮೂಲಕ ಜಾಗ ವಶಕ್ಕೆ ಪಡೆದು ಕಾಮಗಾರಿ ಆರಂಭಿಸಲು ನಿರ್ದೇಶನ ನೀಡಲಾಗಿದೆ.
ಇನ್ನು ಈಜೀಪುರ ಒಳವರ್ತುಲ ರಸ್ತೆದಿಂದ ಸರ್ಜಾಪುರ ಹೊರವರ್ತುಲ ರಸ್ತೆಯವರೆಗೆ 2.6 ಕಿ.ಮೀ ಉದ್ದದ ಬಫರ್ ರಸ್ತೆ ಕಾಮಗಾರಿಯನ್ನು ರಕ್ಷಣಾ ಇಲಾಖೆ ಜಾಗದ ಬಳಿ ಆರ್‌ಸಿಸಿ ಗೋಡೆಯೊಂದಿಗೆ 44 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಕೆಲಸ ಪ್ರಾರಂಭಿಸಲಾಗಿದೆ. 24 ಮೀ. ಅಗಲದ ಬಫರ್ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಪ್ರಹ್ಲಾದ್ ರವರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಯ ಹೆಬ್ಬಾಳದಿಂದ ಯಲಹಂಕದವರೆಗೆ ರಸ್ತೆ ಮೇಲೆ ಕಸ / ಕಟ್ಟಡಗಳ ಅವಶೇಷ ತ್ಯಾಜ್ಯ ಗುಡ್ಡ, ಕೊಳಚೆ ನೀರು ಹರಿಯುತ್ತಿರುವ ಬಗ್ಗೆ ದೂರುಗಳಿದ್ದು, ಅವನ್ನು ತಕ್ಷಣ ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವ ಸ್ಥಳಗಳನ್ನು ಜಲಮಂಡಳಿಯಿಂದ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ನಗರದಲ್ಲಿ ಹೊಸದಾಗಿ ಡಾಂಬರೀಕರಣಗೊಂಡಿರುವ ರಸ್ತೆಗಳಲ್ಲಿ ಲೇನ್ ಮಾರ್ಕಿಂಗ್ ಮಾಡಬೇಕು. ಜೊತೆಗೆ ಕರ್ಬ್ಸ್‌ಗಳಿಗೆ ಪೇಂಟಿಂಗ್, ಜೀಬ್ರಾ ಕ್ರಾಸಿಂಗ್ ಹಾಗೂ ಕ್ಯಾಟ್ ಐಸ್ ಅಳವಡಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ಕೊಡಲಾಗಿದೆ.
ಮುಂದುವರಿದು ಜಿಬಿಎ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ಅಗತ್ಯ ಕಾಮಗಾರಿಗಳನ್ನು ಕೈಗೊಂಡು ಮಳೆಯ ಸಮಯದಲ್ಲಿ ಯಾವುದೇ ರೀತಿಯ ಅಸೌಕರ್ಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಕೆಎಸ್‌ಎನ್‌ಡಿಎಂಸಿ ವತಿಯಿಂದ ರಾಜಕಾಲುವೆಗಳಲ್ಲಿ ಅಳವಡಿಸಿರುವ ನೀರಿನ ಮಟ್ಟ ಅಳೆಯುವ ಸೆನ್ಸಾರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಿ, ಅಗತ್ಯವಿರುವ ಸ್ಥಳಗಳಲ್ಲಿ ಹೆಚ್ಚುವರಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಿದ್ದಾರೆ.
ಸಭೆಯಲ್ಲಿ ಚರ್ಚೆಯಾದ ಇತರೆ ಪ್ರಮುಖ ಅಂಶಗಳು:
1. ಮೆಟ್ರೋ ನಿಲ್ದಾಣಗಳಲ್ಲಿ ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಕುರಿತು, ಸ್ಟೇಷನ್‌ವಾರು ಪಟ್ಟಿ ನೀಡುವಂತೆ ಸೂಚನೆ.
2. ಬೆಸ್ಕಾಂ, ಜಲಮಂಡಳಿ, ಕೆಪಿಟಿಸಿಎಲ್, ಗೇಲ್ ಸೇರಿದಂತೆ ಇತರೆ ಇಲಾಖೆಗಳು ರಸ್ತೆ ಕತ್ತರಿಸುವಿಕೆಗಾಗಿ ಮಾರ್ಕ್ಸ್ ಮೂಲಕ ಅನುಮತಿ ಪಡೆದ ನಂತರ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು.
3. ಕೇಂದ್ರ ನಗರ ಪಾಲಿಕೆಯಲ್ಲಿ ಖರೀದಿಸಿರುವ ಟೋಯಿಂಗ್ ವಾಹನಗಳನ್ನು ಕಾರ್ಯಗತಗೊಳಿಸಲು ಸೂಚನೆ.
4. ಮರ ಗಣತಿ ಕಾರ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ 2026 ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ದೇಶನ.
5. ನಾಗವಾರ ಜಂಕ್ಷನ್‌ನಲ್ಲಿ ಜಲಮಂಡಳಿಯಿಂದ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಆಯುಕ್ತರು ಸೂಚನೆ ನೀಡಿದ್ದಾರೆ.












Click it and Unblock the Notifications