ಬೆಂಗಳೂರಿಗೆ ಪರ್ಯಾಯವಾಗಿ 3 ಹೊಸ ನಗರಗಳ ಅಭಿವೃದ್ಧಿ: ಡಿ.ಕೆ ಶಿವಕುಮಾರ್
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಮಿತಿ ಮೀರಿದ ವಾಹನಗಳ ಸಂಖ್ಯೆ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹೊಸ ನಗರಗಳ ಅಭಿವೃದ್ಧಿ ಯೋಜನೆ ರೂಪಿಸುತ್ತಿರುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರು ನಗರವು ಬೃಹದಾಕಾರವಾಗಿ ಬೆಳೆಯುತ್ತಿದೆ. ಇದೀಗ ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುವುದು ಹಾಗೂ ಬೆಂಗಳೂರಿಗೆ ಪರ್ಯಾಯವಾಗಿ ಮೂರು ಹೊಸ ನಗರಗಳನ್ನು ಬೆಂಗಳೂರು ಹೊರ ವಲಯದಲ್ಲಿ ಅಭಿವೃದ್ಧಿ ಮಾಡುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಘೋಷಣೆ ಮಾಡಿದ್ದಾರೆ. ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೊಸ ಹೊಸ ಘೋಷಣೆಗಳನ್ನು ಮಾಡುತ್ತಿದ್ದು, ಈ ಮೂರು ನಗರಗಳ ಅಭಿವೃದ್ಧಿ ವಿಚಾರವು ಇದಕ್ಕೆ ಮತ್ತೊಂದು ಹೊಸ ಸೇರ್ಪಡೆಯಾದಂತೆ ಆಗಿದೆ.

ನಗರದ ಮೂಲಸೌಕರ್ಯದ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಈ ಸವಾಲನ್ನು ಎದುರಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿರುವುದಾಗಿ ಹೇಳಿದೆ. ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ದೀರ್ಘಾವಧಿಯ ಪರಿಹಾರವಾಗಿ ಮೂರು ಹೊಸ ನಗರಗಳ ಅಭಿವೃದ್ಧಿ ಪ್ರಸ್ತಾವನೆಯನ್ನು ಮುಂದಿರಿಸಿದ್ದಾರೆ.
ಬೆಂಗಳೂರಿನ ಹೊರಗೆ 3 ಹೊಸ ನಗರಗಳ ಅಭಿವೃದ್ಧಿ
ಇನ್ನು ಈ ಯೋಜನೆಯ ಭಾಗವಾಗಿ ಬೆಂಗಳೂರಿನ ಹೊರ ಭಾಗದ ಬಿಡದಿ, ಸೋಲೂರು ಹಾಗೂ ನಂದಗುಡಿ ಪ್ರದೇಶಗಳನ್ನು ಮೂರು ಹೊಸ ನಗರಗಳನ್ನಾಗಿ ಅಭಿವೃದ್ಧಿ ಮಾಡುವುದಾಗಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಈ ಮೂರು ಪ್ರದೇಶಗಳು ಸಹ ಬೆಂಗಳೂರಿನ ಹೊರ ವಲಯದಲ್ಲಿವೆ. ಈ ಪ್ರದೇಶಗಳನ್ನು ಅಗತ್ಯ ಮೂಲಸೌಕರ್ಯ, ಉದ್ಯೋಗಾವಕಾಶಗಳು ಮತ್ತು ನಗರ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸುವ ಗುರಿಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ. ಬೆಂಗಳೂರಿನಲ್ಲಿ ಇರುವ ಪ್ರಮುಖ ಹಾಗೂ ಅಗತ್ಯವಾದ ಸೌಕರ್ಯಗಳನ್ನು ಈ ಮೂರು ನಗರಗಳಲ್ಲೂ ಅಭಿವೃದ್ಧಿಪಡಿಸುವುದಕ್ಕೆ ಯೋಜನೆ ರೂಪಿಸಿಕೊಳ್ಳುತ್ತಿರುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರಿನ ಜನಸಂಖ್ಯೆ ಹೆಚ್ಚಳ
ಸಿಲಿಕಾನ್‌ಸಿಟಿ ಬೆಂಗಳೂರಿನಲ್ಲಿ ದಿನದಿಂದ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಇದರ ಪರಿಣಾಮ ಬೆಂಗಳೂರು ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಭಾರೀ ಒತ್ತಡ ನಿರ್ಮಾಣವಾಗುತ್ತಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಮೂರು ಹೊಸ ನಗರಗಳ ಅಭಿವೃದ್ಧಿ ಮಾಡುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಜನಸಂಖ್ಯೆಯು ಅಂದಾಜು 1.4 ಕೋಟಿಯಷ್ಟಿದೆ. ಅಲ್ಲದೇ ಸುಮಾರು ಎರಡು ಲಕ್ಷ ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರು ಸಹ ಇಲ್ಲಿ ನೆಲೆಸಿದ್ದಾರೆ.
ನಗರದ ಹೊರ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಸೌಲಭ್ಯಗಳನ್ನು ಒದಗಿಸುವುದರಿಂದ ಬೆಂಗಳೂರಿನೊಳಗಿನ ಜನಸಂಖ್ಯಾ ಸಾಂದ್ರತೆಯನ್ನು ನಿಯಂತ್ರಿಸಲು, ನಗರಕ್ಕೆ ದೈನಂದಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ನಿರೀಕ್ಷಿಸಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಬಳಕೆ: ಇನ್ನು ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ ಬಳಸಿಕೊಂಡು ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿದೆ. ಇದರಲ್ಲಿ ಮುಖ್ಯವಾಗಿ ಡಿ.ಕೆ ಶಿವಕುಮಾರ್ ಅವರು ಹಲವು ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.












Click it and Unblock the Notifications