ಮಲ್ಲೇಶ್ವರಂ ಡಿಗ್ರಿ ಕಾಲೇಜಿನ ಅಭಿವೃದ್ಧಿಗೆ 3.5 ಕೋಟಿ ರೂ: ಅಶ್ವತ್ಥ ನಾರಾಯಣ
ಬೆಂಗಳೂರು, ಸೆಪ್ಟೆಂಬರ್ 03: ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಮತ್ತು ಕ್ಷೇತ್ರದ ಶಾಸಕ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಎನ್ಇಪಿ ಮೂಲಕ ಪರಿಕಲ್ಪನೆ ಆಧಾರಿತ ಕಲಿಕೆ ಜಾರಿಗೆ ಬಂದಿದೆ. ಸರಕಾರಿ ಕಾಲೇಜುಗಳಲ್ಲಿ ತಂತ್ರಜ್ಞಾನ ಅಳವಡಿಕೆ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ನಡೆಸಲಾಗುತ್ತಿದೆ. ಮೂರೂವರೆ ಕೋಟಿ ರೂ.ಗಳಲ್ಲಿ ಈ ಕಾಲೇಜಿಗೆ ಸುಸಜ್ಜಿತ ಸಭಾಂಗಣ, ಲಿಫ್ಟ್, ಪ್ರಯೋಗಾಲಯ, ಗ್ರಂಥಾಲಯ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳನ್ನು ಕೌಶಲ್ಯಾಭಿವೃದ್ಧಿ ಮೂಲಕ ಉದ್ಯಮಿಗಳನ್ನಾಗಿ ಮತ್ತು ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಲಾಗುತ್ತಿದೆ. ಜತೆಗೆ ಕಾಲೇಜುಗಳಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ನೀಡಲಾಗುತ್ತಿದೆ. ರಾಜ್ಯದಲ್ಲಿ 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯ ಕಲಿಯುತ್ತಿದ್ದಾರೆ. ಜತೆಗೆ ಇದು ಪಠ್ಯಕ್ರಮದ ಭಾಗವಾಗಿದೆ ಎಂದು ಸಚಿವರು ಹೇಳಿದರು.

ಪತ್ರಕರ್ತ ಎಚ್ ಆರ್ ರಂಗನಾಥ್ ಮಾತನಾಡಿ, ಯುವಜನರು ಪಠ್ಯದ ಕಲಿಕೆಯ ಜತೆಯಲ್ಲಿ ಬದುಕಿನ ಕಲೆಯನ್ನು ತಮ್ಮದಾಗಿ ಮಾಡಿಕೊಳ್ಳಬೇಕು ಎಂದ ಅವರು, ಉನ್ನತ ಶಿಕ್ಷಣ ಇಲಾಖೆಯಲ್ಲಿ ಜಾರಿಗೆ ತಂದಿರುವ ಯುಯುಸಿಎಂಎಸ್, ಎಲ್ ಎಂಎಸ್ ಹಾಗೂ ಆನ್ ಲೈನ್ ಮೂಲಕ ಕೊಡುತ್ತಿರುವ ಅಲ್ಪಾವಧಿ ಕೋರ್ಸ್ ಗಳನ್ನು ಕಲಿಸುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಮತ್ತೋರ್ವ ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರು, "ಈಗಿನ ಮಕ್ಕಳಿಗೆ ಹೆಚ್ಚು ಅನುಕೂಲಗಳಿವೆ. ಆಧುನಿಕ ಜಗತ್ತಿಗೆ ಬೇಕಾದ ಅರಿವನ್ನು ಸಂಪಾದಿಸಿಕೊಳ್ಳುವುದು ಈಗ ಮುಖ್ಯವಾಗಿದೆ," ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ.ಪ್ರತಿಭಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಪ್ರೊ.ಶೈಲಜಾ ಉಪಸ್ಥಿತರಿದ್ದರು.












Click it and Unblock the Notifications