ಮಣ್ಣಿನ ಮಗ ಎಚ್.ಡಿ ದೇವೇಗೌಡರು ಪ್ರಧಾನಿಯಾಗಿ ಇಂದಿಗೆ 25 ವರ್ಷ
ಬೆಂಗಳೂರು, ಜೂನ್ 1: ಕರ್ನಾಟಕದ ಮಣ್ಣಿನ ಮಗ ಅಂತಲೇ ಪ್ರಸಿದ್ಧವಾಗಿರುವ ಎಚ್.ಡಿ ದೇವೇಗೌಡರು ಭಾರತದ ಪ್ರಧಾನಿಯಾಗಿ ಇಂದಿಗೆ (ಜೂ.1) 25 ವರ್ಷಗಳಾಗಿವೆ.
ಎಚ್.ಡಿ ದೇವೇಗೌಡ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಜೂ. 1ಕ್ಕೆ 25 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಸಾಧನೆ ಸ್ಮರಣೆ ಅಭಿಯಾನ ಕೈಗೊಳ್ಳಲಾಗಿದೆ.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ರಾಜಕೀಯ ಯಾನ, ಸಾಧನೆ, ದೇಶಕ್ಕೆ- ರಾಜ್ಯಕ್ಕೆ ನೀಡಿದ ಕೊಡುಗೆಗಳ ಕುರಿತು ಹಿರಿಯ ರಾಜಕಾರಣಿಗಳು, ಹಿರಿಯ ಪತ್ರಕರ್ತರು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಜೂ.1ರಿಂದ 25ರವರೆಗೆ 25 ದಿನ ನಡೆಯಲಿರುವ ಸ್ಮರಣಾ ಅಭಿಯಾನದಲ್ಲಿ 25 ಪ್ರಮುಖರು ಎಚ್.ಡಿ ದೇವೇಗೌಡರ ಕುರಿತು ವಿಡಿಯೋ ಮೂಲಕ ಮಾತನಾಡಲಿದ್ದಾರೆ.
ಪ್ರತಿದಿನ ಸಂಜೆ 5 ಗಂಟೆಗೆ ಜೆಡಿಎಸ್‌ನ ಅಧಿಕೃತ ಫೇಸ್‌ಬುಕ್ ಪುಟ- JDSpartyofficial ಮತ್ತು ಟ್ವಿಟರ್ JanataDal_S ಪುಟಗಳಲ್ಲಿ ಆ ವಿಡಿಯೋಗಳು ಪ್ರಸಾರವಾಗಲಿವೆ ಎಂದು ಜೆಡಿಎಸ್ ಪಕ್ಷ ತಿಳಿಸಿದೆ.

ಹಿಂದಿನ ನೆನಪು
ಜೆ.ಎಚ್ ಪಟೇಲ್ ಅವರು ಮುಖ್ಯಮಂತ್ರಿಗಳಾಗುವಾಗ ಜನತಾ ದಳದಲ್ಲಿ 36 ಶಾಸಕರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರು. ಕುರುಬ ಸಮುದಾಯಕ್ಕೆ ಸೇರಿದ್ದ 4 ಶಾಸಕರಿದ್ದರು, ಹೀಗಾಗಿ ಜಾತಿ ಬೆಂಬಲವೂ ಜೆ.ಎಚ್ ಪಟೇಲ್ ಅವರಿಗೆ ಸಿಕ್ಕಂತಾಗಿತ್ತು.
ಆಗ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದ ಸಿದ್ದರಾಮಯ್ಯನವರು ಒಲ್ಲದ ಮನಸ್ಸಿನಿಂದಲೇ ಉಪ ಮುಖ್ಯಮಂತ್ರಿಯಾಗಿ ಮುಂದುವರೆಯಲು ಒಪ್ಪಿಕೊಂಡಿದ್ದರು.

ಜೆ.ಎಚ್ ಪಟೇಲ್ ಕರ್ನಾಟಕದ ಮುಖ್ಯಮಂತ್ರಿಯಾದರು
ಇದೆಲ್ಲವೂ ಆಗಿ ಎಚ್.ಡಿ ದೇವೇಗೌಡ ಅವರು ಪ್ರಧಾನಿಗಳಾಗಿ, ಜೆ.ಎಚ್ ಪಟೇಲ್ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಜೆ.ಎಚ್ ಪಟೇಲ್ ಅವರೇ ಸಿಎಂ ಆಗಬೇಕೆಂದು ಎಚ್.ಡಿ ದೇವೇಗೌಡರು ಒಲವು ವ್ಯಕ್ತಪಡಿಸಿದ್ದರು.
ಜೆ.ಎಚ್ ಪಟೇಲರನ್ನು ಸಿಎಂ ಮಾಡದಿದ್ದರೆ ಪ್ರಬಲ ಸಮುದಾಯದ ಬೆಂಬಲ ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ದೇವೇಗೌಡರು ಮನಗೊಂಡಿದ್ದರು. ಹೀಗಾಗಿ ಕೇವಲ ರಾಮಕೃಷ್ಣ ಹೆಗಡೆ ಅವರ ಬೆಂಬಲದಿಂದ ಮಾತ್ರ ಜೆ.ಎಚ್ ಪಟೇಲ್ ಸಿಎಂ ಆಗಿರಲಿಲ್ಲ ಎಂಬುದು ಹಿರಿಯ ರಾಜಕಾರಣಿಗಳ ಮಾಹಿತಿ ಹಂಚಿಕೊಂಡಿದ್ದಾರೆ.

ಮೊಮ್ಮಗನ ಶುಭ ಸಂದೇಶ
ಮಣ್ಣಿನ ಮಗ, ಕರ್ನಾಟಕದ ಹೆಮ್ಮೆಯ ಸುಪುತ್ರ ಎಚ್.ಡಿ ದೇವೇಗೌಡರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ಭರ್ತಿ 25 ವರ್ಷಗಳನ್ನ ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಅಧಿಕಾರದ ಅವಧಿ ಸಣ್ಣದಾದರೂ ಮಾಡಿದ ಸಾಧನೆ ದೊಡ್ಡದು. ಇಡೀ ದೇಶದಲ್ಲಿ ಐಟಿ ಉದ್ಯಮಕ್ಕೆ ಹತ್ತು ವರ್ಷಗಳ ಕಾಲ ಟ್ಯಾಕ್ಸ್ ಹಾಲಿ ಡೇ, ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ಗಂಗಾ ನದಿ ವಿವಾದ ಬಗೆಹರಿಸಿದ್ದು, ಈಶಾನ್ಯದ ಏಳು ರಾಜ್ಯಗಳಿಗೆ ಭೇಟಿ ನೀಡಿ, ಒಟ್ಟು 6 ಸಾವಿರ ಕೋಟಿಯ ಪ್ಯಾಕೇಜ್ ಘೋಷಣೆ ಮಾಡಿದ್ದರು.

ರಾಜಕೀಯದಲ್ಲಿ ಹಲವು ನೋವು- ನಲಿವು ಎಚ್‌ಡಿಡಿ
ಏರ್‌ಪೋರ್ಟ್, ರೈಲ್ವೇ ಯೋಜನೆ ರಾಷ್ಟ್ರೀಯ ಹೆದ್ದಾರಿಗಳು, ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ವಿಶೇಷ ಅನುದಾನ ಮಂಜೂರು. ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿ 3 ಸಾವಿರ ಕೋಟಿ ಪ್ಯಾಕೇಜ್, ನೆನೆಗುದಿಗೆ ಬಿದ್ದಿದ್ದ ದೆಹಲಿ ಮೆಟ್ರೋಗೆ ಚಾಲನೆ, ನಾಗಾ ಬಂಡುಕೋರರೊಂದಿಗೆ ಶಾಂತಿ ಮಾತುಕತೆ ನಡೆಸಿ ಯುದ್ದವಿರಾಮ ಘೋಷಣೆ ಮಾಡಿದ್ದರು.
ಇನ್ನು ತವರು ಕರ್ನಾಟಕಕ್ಕೂ ಎಚ್.ಡಿ ದೇವೇಗೌಡರ ಕೊಡುಗೆ ಅಷ್ಟಿಷ್ಟಲ್ಲ. ರೈಲ್ವೇ, ನೀರಾವರಿ, ವಿದ್ಯುತ್, ಕೈಗಾರಿಕೆ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರಾಜಕೀಯದಲ್ಲಿ ಹಲವು ನೋವು- ನಲಿವುಗಳನ್ನು ಕಂಡಿರುವ ದೇವೇಗೌಡರ ಪಯಣ ನಮ್ಮಂತ ಯುವ ಪೀಳಿಗೆಗೆ ದಾರಿ ದೀಪ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಮರಿಸಿದ್ದಾರೆ.