ಕೇಳ್ರಪ್ಪೋ ಕೇಳ್ರಿ ಆಟೋ ಓಡ್ಸೋರ್ ಮ್ಯಾಗ್ ದಂಡಾ ಹಾಕ್ಯಾರಂತಾ
ಬೆಂಗಳೂರು, ಜನವರಿ 7: ಕೇಳ್ರಪ್ಪೋ ಕೇಳ್ರಿ... ಆಟೋ ಹತ್ತೋರಂತ್ಯಾಕ ಭಾಳ್ ರೊಕ್ಕಾ ಕೇಳ್ಯಾರಂತಾ ಆಟೋ ಓಡ್ಸೋರಿಗಿ ಪೊಲೀಸ್ರು ದಂಡ ಹಾಕ್ಯಾರಂತ. ಬೆಂಗಳೂರಿನ್ಯಾಗ ಮೆಟ್ರೋ ಓಡ್ಯಾಡೋ ಸ್ಟಾಪ್‌ನ್ಯಾಗ 21 ಆಟೋರಿಕ್ಷಾ ಓಡ್ಸಾ ಮಂದಿ ಮ್ಯಾಗ ಬೆಂಗಳೂರು ಪೊಲೀಸ್ರು ಬುಧವಾರ 10,500 ರೂಪಾಯಿ ದಂಡ ಹಾಕ್ಯಾರಂತ. ಅಲ್ರೀ ಈಗ ಕಾಲ ಹೆಂಗಾಗೈತಿ ಅಂದ್ರ ನಡುಕೊಂಡ ಓಡಾಡ್ತಿವಿ ಅನ್ನೋ ಮಂದಿನಾ ಹಿಡಿದು 'ನಮ್ ಆಟೋದಾಗ್ ಬರೀ...ನಮ್ ಆಟೋದಾಗ್ ಬರೀ....' ಅನ್ನೋ ಕಥಿ ಆಗ್ಯಾದಾ. ಅದ್ರೊಳಾಗ ಹೆಚ್ಗಿ ರೊಕ್ಕ ಕೊಡ್ರಿ ಅಂದ್ರಾ ಯಾರ್ ಬರ್ತಾರಾ? ಬರೋದ್ ಒಂದು ಕಡಿ ಇರ್ಲಿ. ಆಟೋ ಹತ್ತಾಕಾ ಮಂದಿ ಬಳಿ ರೊಕ್ಕಾ ಎಲ್ಲಿ ಇದಾವಾ..? ಹಿಂಗ್ ಆಟೋ ಓಡ್ಸೋರ್ ಕಥಿ ಆಗಿ ಕುಂತೈತಿ.
ಈ ಪೊಲೀಸ್ರಿಗಿ ಅದ್ಯಾವ್ ಆಟೋದವಾ ಹೆಚ್ಗಿ ರೊಕ್ಕಾ ಕೊಡ್ರಿ ಅಂತ ಕೇಳಿದಾವ್ ಸಿಕ್ನೋ ಏನೋ. ಬರೋಬ್ಬರಿ 21 ಮಂದಿ ಆಟೋ ಓಡ್ರೋರ್ ಮ್ಯಾಗ್ ದಂಡ ಹಾಕಿ ಕುಂತಾರಾ. ಅಲ್ಲಾ... ಈಗ ಕಾಲ ಮೊದ್ಲಂಗ್ ಇಲ್ಲ. ಸುಡುಗಾಡ್ ರೋಗಾ ಬಂದ್ ಎಲ್ಲರ್ನು ಬಳುಕೊಂಡು ಹೊಂಟಾವ್. ದುಡಿಕೋಕ್ ಕೆಲ್ಸ್ ಇಲ್ಲ. ತಿನ್ನಾಕ್ ಕೂಳಿಲ್ಲ. ಇದ್ರಾಗ್ ಕಿತ್ತಿ ತಿನ್ನೋ ಮಂದಿ ಬ್ಯಾರೆ. ಇದ್ರಾಗಾ ಮನುಷ್ಯಾ ಹೇಂಗ್ ಜೀವನ ಮಾಡ್ತಾನಾ? ಅದ್ಯಾವುದೋ ಕೊರಾನಾ ಬರೋಕಿಂತ್ ಮುಂಚೆ ಹೆದ್ರಿಸಿ ಹೆದ್ರಿಸಿ ಮಂದಿನಾ ಹಾಳ್ ಮಾಡಿ ಕುಂತಾರ್ ಈ ರಾಜಕೀಯ ಮಂದಿ.
ಒಂದೀಟು ಕೆಮ್ಮಿದ್ರ ಸಾಕು ಮನಿಗಂಟ ಬಂದು ಕರ್ಕೊಂಡ್ ಹೋಗ್ತಾರಾ. ತಾವು ಬರೋದಲ್ದ ಒಂದಿಷ್ಟು ಮೀಡಿಯಾ ಮಂದಿನೂ ಕರ್ಕೊಂಡು ಬರ್ತಾರಾ. ತಾವು ಟಿವಿ ಒಳಾಗ್ ಬಂದ್ರಿಲ್ಲಾ ಮುಗಿತ್ ಅಲ್ಲಿಗೆ ನಮ್ಮ ಅವರ ಸಂಬಂಧ. ಕರ್ಕೊಂಡು ಹೋಗ್ತಾರಾ ಖರೆ. ಆಮೇಲೆ ನಮ್ನ ಎಲ್ಲಿ ಒಗಿತಾರೋ ಆ ದೇವರೆ ಬಲ್ಲ. ಅದ್ರಾಗ್ ತಣ್ಣಗಿರೋ ಕೋಣಿ(ಎಸಿ) ಬ್ಯಾರೆ ರೊಕ್ಕಾ, ತಣ್ಣಗ್ ಇಲ್ದೆ ಇರೋ ಕೋಣಿಗೆ ಬ್ಯಾರೆ ರೊಕ್ಕಾ. ಇದ್ದದ್ದು ಇಲ್ದೇ ಇರೋದ್ ಟೆಸ್ಟ್ ಮಾಡ್ಸಿ ಇದ್ದಷ್ಟು ರೊಕ್ಕಾ ಕಿತ್ಕೊಂಡು, ಮ್ಯಾಗ್ ಇಷ್ಟು ರೊಕ್ಕಾ ಬಿಟ್ಟಿವಿ ಅಂತೇಳಿ ಕಳ್ಸಿ ಬಿಡ್ತಾರಾ. ಕೊನಿಗಿ ನಮಗ್ ಏನಾಗಿತ್ತು ಅನ್ನೋದು ಯಾರ್ ಸರಿಯಾಗಿ ಹೇಳೋಗಿಂಲ್ಲ. ಬಿಟ್ರಾ ಪ್ರಾಣ ಹೋಕ್ಕೈತಿ ಅನ್ನೋ ಹಂಗ್ ಮಾಡಿ ಕರ್ಕೊಂಡ್ ಹೋಗಿ ಸಾಲಾ ಮಾಡ್ಸಿ ಕೈ ಬಿಡೋ ಮಂದಿ ಊರು ತುಂಬಾ ತುಂಬಿ ಬಿಟ್ಟಾರಾ.

ಇವರಂಗ್ ನಮ್ಮಂತ ಮಂದಿ ಏನಾರಾ ಮಡ್ಲಿಕ್ ಹೋದ್ರ ಪೊಲೀಸ್ರಿಂದ ಹಿಡಿದು ನಮ್ ದೇಶದ ಮಂತ್ರಿಗಳೆಲ್ಲ ನಮ್ ಬೆನ್ನಿಗಿ ಬೀಳ್ತಾರಾ. ಎಲ್ಲಿ ಹೋದ್ರು ನೀವು ಮೂಗಿಗ್ ಬಟ್ಟಿ ಹಾಕಿಲ್ಲ, ಕೈ ತೊಳ್ದಿಲ್ಲ, ದೂರ್ ನಿಂತಿಲ್ಲ ಅಂತ ದಂಡ ಹಾಕ್ತಾರ. ಸ್ವಲ್ಪ ವ್ಯಕ್ತಿ ಗಟ್ಟಿ ಕಂಡಾ ಅಂದ್ರ ಅದ್ರೊಳಾಕ್ ಚಂದ ವಸೂಲಿ ಮಾಡಿ ಕೈಬಿಡ್ತಾರ. ಪಾಪ್ ನಮ್ಮ ಆಟೋ ಮಂದಿ. ದಿನ ದುಡಿದು ಬದ್ಕೋ ಮಂದಿ. ಏರ್ ಧ್ವನಿಲೆ ಮಾತಾಡಲ್ಲ. ಪಾಪ ಪೊಲೀಸಪ್ಪಂಗೂ ಭಾಳ್ ಕೆಲ್ಸಾ ಇರ್ತಾವು. ಅವರು ದಂಡ ವಸೂಲಿ ಮಾಡಿ ಅದ್ಯಾರ್ಯಾರಿಗೆ ಮುಟ್ಸಬೇಕೋ ಏನೋ. ಮ್ಯಾಲಿನೋರ್ ಒತ್ತಡಾ ಅವರ್ ಮ್ಯಾಗ್ ಅದೆಷ್ಟ್ ಇರುತ್ತೋ ಏನೋ. ಆ ಒತ್ತಡ ತಂದು ಕಂಡ ಕಂಡ ದಾರಿ ಹೋಗೋ ಮೋಟರ್ ಸೈಕಲ್ ಓಡ್ಸೋ ಮಂದಿ ಮ್ಯಾಗಾ ನಮ್ಮಂಥ ಮೋಟಾ ಮಂದಿ ಮ್ಯಾಗಾ ಹಾಕಿಬಿಡ್ತಾರಾ. ನಮ್ಮಂಗ್ ಅವರಿಗೂ ಮನ್ಯಾಗ್ ರೊಕ್ಕಾ ತಗೊಂಡ್ ಹೋಗಿಲ್ಲ ಅಂದ್ರ ಹೆಣ್ಮಕ್ಳು ಬೈತಾರ. ದಂಡ ವಸೂಲಿ ಮಾಡಿಲ್ಲಂದ್ರ ಮೇಲಿನ್ ಮಂದಿ ಬೈತಾರಾ. ಪಾಪಾ ಅವರು ಎಷ್ಟು ಅಂತ ಬೈಸ್ಕೋಳ್ತಾರ ಬಿಡ್ರಿ.

ದೊಡ್ಡ ಮೋಟಾರ್ ಸೈಕಲ್ ಮ್ಯಾಗ್ ದೊಡ್ ಮಂದಿ ಹೋಂಟ್ರು ಅಂದ್ರ ಹೆಲ್ಮೆಂಟ್ ಹಾಕ್ಯಾರೋ ಇಲ್ಲಂತನೂ ನೋಡಲ್ಲ. ಟ್ರಾಫಿಕ್ ಫ್ರೀ ಮಾಡ್ಸೋ ಮಂದಿ ಅದ್ಯಾರ ನಮ್ಮಲ್ಲಿ. ಇನ್ನೂ ಈ ಆಟೋ ಫೈನ್ ಯಾವ ಲೆಕ್ಕಾ ಅವರಿಗೆ. ದೊಡ್ಡ ಮಂದಿ ರೋಡ್ನ್ಯಾಗ್ ನಿಂತು ಮಂದಿನ್ ಕರಿಸಿ ಆಫೀಸ್ನ್ಯಾಗ್ ಚೀಲ್ ತುಂಕೊಂಡು ಹೋದ್ರ ಕೇಳೋರ್ ದಿಕ್ಕಿಲ್ಲ. ಅಂಥವರಿಗೆ ಫೈನ್ ಅಂತ ಹೋದ್ರ ಇರೋದೊಂದ್ ಕೆಲ್ಸಾ ಕಿತ್ನೊಂಡು ಹೋಕೈತಿ. ಇನ್ನಾ ಯಾರಾಂತ್ಯಾಕ್ ಅವರು ದಂಡ ವಸೂಲಿ ಮಾಡ್ತಾರಾ? ಆಟೋ ಓಡ್ಸೋರು, ತಳ್ಳೋ ಗಾಡಿ, ಮಾರ್ಕೇಟ್ನ್ಯಾಗ್ ಹೂವು, ಹಣ್ಣು, ತರಕಾರಿ ಮಾರೋ ಮಂದಿನೇ ಕೇಳ್ಬೇಕು. ಯಾಕಂದ್ರ ಅವರೂ ಕೆಲ್ಸಾ ಮಾಡಿವಿ ಅಂತ ತೋರ್ಸೋಬೇಕಲ್ಲ.
ಸುಮ್ ಕುಂತು ಸಂಬಳ ಬರೋದು ಕಷ್ಟ ಐತಿ. ನಾವಂತೂ ಇಲ್ಲಿವರ್ಗೂ ದೊಡ್ ಮಂದಿ ಮ್ಯಾಗ್ ದಂಡ ಮಾಸ್ಕ್ ಹಾಕಿಲ್ಲ, ದೂರ್ ನಿಂತಿಲ್ಲಾ, ಕೈ ತೊಳ್ದಿಲ್ಲ ಅಂತ ದಂಡ ಹಾಕಿದ್ದು ನೋಡಿಲ್ಲ. ಇನ್ನೂ ಜಾಸ್ತಿ ರೊಕ್ಕಾ ಹೇಳಿದ್ರು ಅಂತ ಯಾವ ಅಧಿಕಾರಿಗಳ ಮ್ಯಾಗೂ ಶಿಕ್ಷಾ ಕೊಟ್ಟಿದ್ದು ಕೇಳಿಲ್ಲ. ಆದ್ರೆ ಅದ್ಯಾರೋ ಆಟೋ ಓಡ್ಸೋರ್ ಜಾಸ್ತಿ ರೊಕ್ಕಾ ಕೇಳಿದ್ರು ಅಂತ ಇರೋ ಬರೋ ಆಟೋ ಓಡ್ಸೋರ್ ಮೇಲೆ ಕಣ್ಣಾಕೊಂಡು ಕುಂತ್ವರೆ. ಇನ್ನೂ ನಮ್ ದೇಶದಾಗ ಏನೈನ್ ನೋಡ್ಬೇಕೋ ಏನೋ ನಾವು. ಅದೇನೇ ಆಗ್ಲಿ ನಿಮ್ ಆರೋಗ್ಯ ನೋಡ್ಕೊಳ್ರಿ. ಮೊದ್ಲಾ ಜನ ಬೇರೆ ಸರಿ ಇಲ್ಲ.












Click it and Unblock the Notifications