ಸಿಎಎ ಪ್ರತಿಭಟನೆ ಹತ್ತಿಕ್ಕಲು ಹೊರಡಿಸಿದ್ದ ನಿಷೇಧಾಜ್ಞೆ ಕಾನೂನು ಬಾಹಿರ
ಬೆಂಗಳೂರು, ಫೆಬ್ರವರಿ 13: ಸಿಎಎ ವಿರುದ್ಧ ಪ್ರತಿಭಟನೆ ಹತ್ತಿಕ್ಕಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೊರಡಿಸಿದ್ದ ನಿಷೇಧಾಜ್ಞೆ ಕಾನೂನು ಬಾಹಿರ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ.
ಡಿಸೆಂಬರ್ 18 ರಂದು ನಗರದಾದ್ಯಂತ ನಿಷೇಧಾಜ್ಞೆ ಹೇರಿ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದರು. ಈ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 'ನಿಷೇಧಾಜ್ಞೆ ಹೇರಿದ್ದು ಕಾನೂನು ಬಾಹಿರ ಮತ್ತು ಸಮಯೋಚಿತ ನಿರ್ಣಯವಲ್ಲ' ಎಂದು ಹೇಳಿದೆ.
ಪ್ರಕರಣದ ಬಗ್ಗೆ ಹೈಕೋರ್ಟ್ ಗೆ ಮಾಹಿತಿ ನೀಡಿದ್ದ ಭಾಸ್ಕರ್ ರಾವ್, 'ಸಿಎಎ ಪ್ರತಿಭಟನೆ ನಡೆಯಲಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಾನಿರ್ದೇಶಕರು ಹಾಗೂ ಕೆಲವು ಡಿಸಿಪಿಗಳು ಪತ್ರ ಬರೆದಿದ್ದರು, ಅದರ ಆಧಾರದ ಮೇಲೆ ನಿಷೇಧಾಜ್ಞೆ ಹೇರಲಾಯಿತು' ಎಂದಿದ್ದರು.

ಆದರೆ ಈ ಉತ್ತರವನ್ನು ಒಪ್ಪದ ಹೈಕೋರ್ಟ್, ವಸ್ತು ಸ್ಥಿತಿಯ ಆಧಾರದಲ್ಲಿ ನಿಷೇಧಾಜ್ಞೆ ಹೇರಬೇಕೆ ಹೊರತು, ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶದಿಂದಲೇ ನಿಷೇಧಾಜ್ಞೆ ಹೇರಬಾರದು. ನಿಷೇಧಾಜ್ಞೆ ಹೇರುವ ಮುನ್ನಾ ಹಕ್ಕುಗಳ ಬಗ್ಗೆ ಕಡ್ಡಾಯವಾಗಿ ಚಿಂತನೆ ನಡೆಸಬೇಕು' ಎಂದು ಹೇಳಿದೆ.
ಸುಪ್ರೀಂಕೋರ್ಟ್, ರಾಮಲೀಲಾ ಮೈದಾನದ ಪ್ರಕರಣದಲ್ಲಿ ನೀಡಿದ್ದ ತೀರ್ಪು ಉಲ್ಲೇಖಿಸಿದ ಹೈಕೋರ್ಟ್, ನಿಷೇಧಾಜ್ಞೆಯನ್ನು ಸಮಯೋಚಿತವಾಗಿ ಬಳಸಬೇಕು, ನಿಷೇಧಾಜ್ಞೆ ಹೇರುವ ಮುನ್ನಾ ನಾಗರೀಕ ಹಕ್ಕುಗಳ ಬಗ್ಗೆ ನಿಗಾ ವಹಿಸಬೇಕು ಎಂದಿದೆ.
ಡಿಸೆಂಬರ್ 18 ರಂದು ರಾತ್ರಿ ಏಕಾಏಕಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಹೇರಲಾಯಿತು. ಬೆಂಗಳೂರಿನಲ್ಲಿ ನಿಷೇಧಾಜ್ಞೆ ಹೇರಿದ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಹೇರಲಾಯಿತು.
ಹಠಾತ್ತನೆ ನಿಷೇಧಾಜ್ಞೆ ಹೇರಿದ ಪೊಲೀಸ್ ಇಲಾಖೆಯ ಈ ಕ್ರಮ ಆಶ್ಚರ್ಯಕ್ಕೆ ಕಾರಣವಾಗಿತ್ತು. ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ಇತಿಹಾಸ ಇಲ್ಲದ ಜಿಲ್ಲೆಗಳಲ್ಲೂ ನಿಷೇಧಾಜ್ಞೆ ಹೇರಲಾಗಿತ್ತು. ಇದರ ನಂತರ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರದಲ್ಲಿ ಪೊಲೀಸರ ಗುಂಡಿಗೆ ಇಬ್ಬರು ನಾಗರೀಕರು ಬಲಿಯಾದರು.












Click it and Unblock the Notifications