ಬೆಂಗಳೂರಿಗೆ ಸಿಕ್ತು 10 ಟಿಎಂಸಿ ಹೆಚ್ಚು ಕಾವೇರಿ ನೀರು
ಬೆಂಗಳೂರು, ಡಿ. 13 : ದಿನದಿಂದ ದಿನಕ್ಕೆ ಬೆಳೆಯಿತ್ತಿರುವ ಬೆಂಗಳೂರು ನಗರದಲ್ಲಿ ನೀರಿನ ಕೊರತೆ ಉಂಟಾಗದಂತೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಬೆಂಗಳೂರಿಗೆ ಈಗ ಪೂರೈಕೆಯಾಗುತ್ತಿರುವ 17.64 ಟಿಎಂಸಿ ನೀರಿನ ಜತೆಗೆ ಹೆಚ್ಚುವರಿಯಾಗಿ 10 ಟಿಎಂಸಿ ನೀರು ಹರಿಸಲು ಸರ್ಕಾರ ಒಪ್ಪಿಗೆ ನೀಡಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಬೆಂಗಳೂರಿನ ನೀರಿನ ಬೇಡಿಕೆಯನ್ನು ಪೂರೈಸುವ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿ ಹೆಚ್ಚುವರಿಯಾಗಿ 10 ಟಿಎಂಸಿ ನೀರನ್ನು ಕಾವೇರಿ ನದಿಮೂಲದಿಂದ ಬಳಸಲು ಸರ್ಕಾರದಿಂದ ಅನುಮತಿ ಕೋರಿದ ಬಗ್ಗೆ ಚರ್ಚೆ ನಡೆಯಿತು.

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿರುವ ನೀರಿನ ಬಳಕೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ 10 ಟಿಎಂಸಿಯನ್ನು ನಗರಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಲು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಹೇಳಿದರು. (ಜಲಮಂಡಳಿ ನಿರೀಕ್ಷೆ ಹುಸಿ, ನೀರಿನ ಸಮಸ್ಯೆ ಉಲ್ಬಣ)
ಸುಪ್ರೀಂಕೋರ್ಟ್ ನಲ್ಲಿ ಕಾವೇರಿ ನೀರು ಹಂಚಿಕೆ ವಿವಾದದ ಕುರಿತ ವಿಚಾರಣೆ ಜ.15ರಂದು ನಡೆಯಲಿದೆ. ಅಂದು ವಾದ ಮಂಡಿಸುವಾಗ ರಾಜ್ಯಕ್ಕೆ ನ್ಯಾಯಯುತವಾಗಿ ಹಂಚಿಕೆಯಾದ 270 ಟಿಎಂಸಿ ನೀರಿನಲ್ಲಿ 10 ಟಿಎಂಸಿಯನ್ನು ಬೆಂಗಳೂರಿಗೆ ಪೂರೈಸಲು ಅವಕಾಶ ನೀಡುವಂತೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ಪ್ರತಿನಿತ್ಯ 950 ದಶಲಕ್ಷ ಲೀಟರ್ ನೀರಿನ ಜತೆಗೆ ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದಲ್ಲಿ ನಿತ್ಯ 500 ದಶಲಕ್ಷ ಲೀಟರ್ ನೀರು ಪೂರೈಸುವ ಯೋಜನೆ ಜಾರಿಯಲ್ಲಿದೆ. ಆದರೆ, 500 ದಶಲಕ್ಷ ಲೀಟರ್‌ನಲ್ಲಿ 250 ದಶಲಕ್ಷ ಲೀಟರ್ ಮಾತ್ರ ವಿತರಣೆಯಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿಕೊಂಡ ಪ್ರದೇಶಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಜಯಚಂದ್ರ ಮಾಹಿತಿ ನೀಡಿದರು.












Click it and Unblock the Notifications