ಬೆಳಗಾವಿ; ಚಳಿಗಾಲದ ಅಧಿವೇಶನದ ಸಿದ್ಧತೆಗೆ ಸೂಚನೆ
ಬೆಳಗಾವಿ, ನವೆಂಬರ್ 02: ಗಡಿನಾಡು ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲ ಅಧಿವೇಶನಕ್ಕೆ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಳಿಗಾಲದ ಅಧಿವೇಶನ ಸಿದ್ಧತೆಗೆ ಸಂಬಂಂಧಿಸಿದಂತೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಹಾಗೂ ಹೋಟೆಲ್ ಮಾಲೀಕರ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.

ನಿತೇಶ್ ಪಾಟೀಲ ಮಾತನಾಡಿ, "ವಿಧಾನಮಂಡಲದ ಚಳಿಗಾಲ ಅಧಿವೇಶನ ಡಿಸೆಂಬರ್‌ನಲ್ಲಿ ನಡೆಯಲಿದ್ದು, ದಿನಾಂಕ ಇನ್ನೂ ನಿಗದಿಪಡಿಸಿರುವುದಿಲ್ಲ. ಆದರೂ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು" ಎಂದು ಸೂಚನೆ ಕೊಟ್ಟರು.
ಅಧಿಕಾರಿಗಳ ಜೊತೆ ಸಭೆ; ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ನಗರದ ಎಲ್ಲಾ ಹೋಟೆಲ್ ಹಾಗೂ ವಸತಿಗೃಹಗಳ ಮಾಲೀಕರು, ವ್ಯವಸ್ಥಾಪಕರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ವಸತಿ ಸಮಿತಿ, ಆಹಾರ ಸಮಿತಿ, ಸಾಮಗ್ರಿಗಳ ಖರೀದಿ ಹಾಗೂ ಮುದ್ರಣ ಸಮಿತಿ, ಸಾರಿಗೆ ಹಾಗೂ ಇಂಧನ ಸಮಿತಿ, ಆರೋಗ್ಯ ಸಮಿತಿ, ಪಾಸ್ ವಿತರಣಾ ಸಮಿತಿ, ದೂರು ನಿರ್ವಹಣಾ ಸಮಿತಿ ಸೇರಿದಂತೆ ಕಳೆದ ಬಾರಿಯಂತೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು. ಪ್ರತಿಯೊಂದು ಸಮಿತಿಯವರು ಪೂರ್ವಭಾವಿ ಸಭೆಯನ್ನು ನಡೆಸಿ ಸಿದ್ಧತೆಗಳನ್ನು ಆರಂಭಿಸಬೇಕು ಎಂದರು.
ಅಧಿವೇಶನಕ್ಕೆ ಆಗಮಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಆದ್ದರಿಂದ ಡಿಸೆಂಬರ್ ತಿಂಗಳ ಆರಂಭ ವಾರದಿಂದ ಯಾವುದೇ ಹೋಟೆಲ್‌ಗಳು ಸಾರ್ವಜನಿಕರ ಬುಕ್ಕಿಂಗ್‌ಗಳನ್ನು ಮಾಡದಿರುವುದು ಸೂಕ್ತ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಡಿಸೆಂಬರ್ 4ರಿಂದ ಅಧಿವೇಶನ ಆರಂಭಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ನವೆಂಬರ್ 6ರ ಬಳಿಕ ಸ್ಪಷ್ಟಚಿತ್ರಣ ದೊರೆಯಲಿದೆ. ಕೊನೆಗಳಿಗೆಯಲ್ಲಿ ದಿನಾಂಕ ವ್ಯತ್ಯಾಸವಾಗಬಹುದು. ಹೋಟೆಲ್ ಕೊಠಡಿಗಳ ಬುಕ್ಕಿಂಗ್ ಮಾಡದಿರುವುದು ಉತ್ತಮ ಎಂದು ಹೋಟೆಲ್ ಮಾಲೀಕರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಕಳೆದ ಬಾರಿ ಹೊಟೇಲ್ ಕೊಠಡಿಗಳ ಬಿಲ್‌ಗಳನ್ನು ಅತ್ಯಂತ ತ್ವರಿತವಾಗಿ ಹಾಗೂ ಸಂಪೂರ್ಣ ಬಿಲ್ ಪಾವತಿಸಲಾಗಿದೆ. ಈ ಬಾರಿ ಕೂಡ ಯಾವುದೇ ವಿಳಂಬವಿಲ್ಲದೇ ಬಿಲ್ ಪಾವತಿಸಲಾಗುವುದು. ಕೊಠಡಿಗಳ ಸ್ವಚ್ಛತೆ, ಆಹಾರದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಅಧಿವೇಶನಕ್ಕೆ ಆಗಮಿಸುವವರಿಗೆ ಉತ್ತಮ ಅತಿಥ್ಯವನ್ನು ಒದಗಿಸಬೇಕು ಎಂದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್. ಎನ್. ಸಿದ್ದರಾಮಪ್ಪ ಮಾತನಾಡಿ, "ಅಧಿವೇಶನ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು. ಜಿಲ್ಲಾಡಳಿತದ ನಿರ್ದೇಶನ ಪಾಲಿಸಬೇಕು. ಅಧಿವೇಶನ ಸಂದರ್ಭದಲ್ಲಿ ಬಂದೋಬಸ್ತ್, ಸಾರಿಗೆ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು. ಅಧಿಕಾರಿ ಹಾಗೂ ಸಿಬ್ಬಂದಿಗೆ ಊಟ, ವಸತಿ ಮತ್ತಿತರ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗುವುದು" ಎಂದು ಹೇಳಿದರು.
ಕರ್ನಾಟಕ ಸರ್ಕಾರ ಡಿಸೆಂಬರ್ 4 ರಿಂದ 15ರ ತನಕ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಸಾಧ್ಯತೆ ಇದೆ. ಅಧಿವೇಶನದ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ರಾಜ್ಯದಲ್ಲಿ ಬರಪರಿಸ್ಥಿತಿ ಇದೆ. ವೆಚ್ಚಕ್ಕೆ ಕಡಿವಾಣ ಹಾಕಲು ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದಿಲ್ಲ ಎಂಬ ಚರ್ಚಯೂ ಸಹ ನಡೆಯುತ್ತಿದೆ.
ಬೆಳಗಾವಿಯ ರಾಜಕಾರಣದ ಬಗ್ಗೆ ಬೆಂಗಳೂರಿನ ತನಕ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಗಡಿವಿವಾದದ ಕಿಡಿ ಹೊತ್ತಿರುವ ಸಂದರ್ಭದಲ್ಲಿಯೇ ಬೆಳಗಾವಿ ಮತ್ತೊಮ್ಮೆ ಅಧಿವೇಶನ ನಡೆಯಲಿದೆ.












Click it and Unblock the Notifications