ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ : ಡಾ.ರವೀಂದ್ರ
ಬೆಳಗಾವಿ, ನವೆಂಬರ್ 14 : 'ಇಂದಿನಿಂದ ಖಾಸಗಿ ಆಸ್ಪತ್ರೆಗಳ ವೈದ್ಯರು ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ' ಎಂದು ಡಾ.ಎಚ್.ಎನ್.ರವೀಂದ್ರ ಹೇಳಿದರು.
ಬೆಳಗಾವಿಯಲ್ಲಿ ಮಂಗಳವಾರ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಎಚ್.ಎನ್.ರವೀಂದ್ರ ಅವರು, 'ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ.

ನಾನು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ' ಎಂದು ಹೇಳಿದರು.
'ಈ ಮಸೂದೆ ತಿದ್ದುಪಡಿಯಾಗಿ ಮಂಡನೆಯಾಗುವ ತನಕ ಉಪವಾಸ ಮುಂದುವರೆಯಲಿದೆ. ಬಾಗಲಕೋಟೆ, ಹಾವೇರಿ, ಬೆಳಗಾವಿ, ಕೆಜಿಎಫ್, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳ ವೈದ್ಯರು ಇದಕ್ಕಾಗಿ ಆಗಮಿಸಿದ್ದಾರೆ' ಎಂದರು.
ರಾಜೀನಾಮೆ ನೀಡುತ್ತೇನೆ ಎಂಬ ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರವೀಂದ್ರ ಅವರು, 'ರಾಜೀನಾಮೆ ಕೊಡುವೆ ಎನ್ನುವುದು ಅವರ ವಯಕ್ತಿಕ ವಿಚಾರ. ಅವರು ರಾಜೀನಾಮೆ ಕೊಡುವ ಬದಲು ಸಮಸ್ಯೆಗೆ ಸ್ಪಂದಿಸಲಿ. ಇಲ್ಲವಾದರೆ ನಮ್ಮನ್ನಾದರೂ ಕೊಲ್ಲಲಿ. ಸುಮ್ಮನೆ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುದು ಬೇಡ' ಎಂದರು.
ಗಂಭೀರವಾಗಿ ತೆಗೆದುಕೊಳ್ಳಿ : 'ವೈದ್ಯರ ಪ್ರತಿಭಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, 'ಈಗಾಗಲೇ ಎರಡು ಸಾವು ಸಂಭವಿಸಿದೆ. ಇನ್ನಷ್ಟು ಅನಾಹುತ ಆಗುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರವೇ ಆಗುವ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ' ಎಂದರು.












Click it and Unblock the Notifications