Vande Bharat; ಬೆಂಗಳೂರು-ಧಾರವಾಡ ರೈಲು ಬೆಳಗಾವಿಗೆ ವಿಸ್ತರಿಸಲು ಸಿದ್ದರಾಮಯ್ಯ ಪತ್ರ
ಬೆಂಗಳೂರು, ಅಕ್ಟೋಬರ್ 31: ಬೆಳಗಾವಿಗೆ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿದೆ. ಈ ಬೇಡಿಕೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಧ್ವನಿಗೂಡಿಸಿದ್ದಾರೆ. ಈ ಕುರಿತು ಅವರು ಕೇಂದ್ರ ರೈಲ್ವೆ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಬೆಳಗಾವಿಗೆ ವಂದೇ ಭಾರತ್ ರೈಲು ವಿಸ್ತರಣೆ ಮಾಡಬೇಕು ಎಂದು ಪತ್ರವನ್ನು ಬರೆದಿದ್ದಾರೆ. ಸದ್ಯ ಇರುವ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕೇಂದ್ರ ರೈಲ್ವೆ ಸಚಿವಾಲಯ ಕರ್ನಾಟಕದಲ್ಲಿ 2ನೇ ವಂದೇ ಭಾರತ್ ರೈಲಾಗಿ ಬೆಂಗಳೂರು-ಧಾರವಾಡ ರೈಲನ್ನು ಓಡಿಸುತ್ತಿದೆ. ಈ ರೈಲು ಸೇವೆ ಆರಂಭವಾದಾಗಲೂ ಇದನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಈಗ ಸಿದ್ದರಾಮಯ್ಯ ಅವರು ಈ ಕುರಿತು ಪತ್ರವನ್ನು ಬರೆದಿದ್ದಾರೆ.
ಮುಖ್ಯಮಂತ್ರಿಗಳ ಪತ್ರದ ವಿವರ; ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಿದರೆ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.
ವಂದೇ ಭಾರತ್ ರೈಲು ಬೆಳಗಾವಿ ಜಿಲ್ಲೆಯ ತನಕ ವಿಸ್ತರಣೆಯಾದರೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಉತ್ತಮ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ. ಆದ್ದರಿಂದ ರೈಲ್ವೆ ಸಚಿವಾಲಯ ಈ ಕುರಿತು ಗಮನ ಹರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಬೆಳಗಾವಿ ವಿಭಾಗದ ಕಿತ್ತೂರು ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಕನ್ನಡಿಗರು ಇದ್ದಾರೆ. ಕೇಂದ್ರ ಸರ್ಕಾರ ವಂದೇ ಭಾರತ್ ರೈಲನ್ನು ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ಓಡಿಸುತ್ತಿದೆ. 27 ಜೂನ್ 2023ರಂದು ಈ ರೈಲು ಸಂಚಾರ ಆರಂಭವಾಗಿದೆ.
ಈ ವಂದೇ ಭಾರತ್ ರೈಲಿನಿಂದಾಗಿ ಧಾರವಾಡ, ಹುಬ್ಬಳ್ಳಿ ಮತ್ತು ದಾವಣಗೆರೆಗೆ ಬೆಂಗಳೂರಿನ ಜೊತೆ ಸಂಪರ್ಕ ಉತ್ತಮವಾಗಿದೆ. ಬೆಳಗಾವಿ ಸಹ ಕೈಗಾರಿಕೆ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಪ್ರಸಿದ್ಧಿಯಾಗಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯು ಆರ್ಥಿಕವಾಗಿ ಪ್ರಬಲವಾಗಿದೆ. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖನೆ, ಅಲ್ಯೂಮಿನಿಯಂ ಸೇರಿದಂತೆ ಪ್ರಮುಖ ಕೈಗಾರಿಕೆಗಳಿವೆ. ಆಟೋ ಮೊಬೈಲ್ ಬಿಡಿಭಾಗಗಳನ್ನು ತಯಾರು ಮಾಡಲಾಗುತ್ತದೆ. ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಬೆಳಗಾವಿ ಪ್ರವಾಸಿ ತಾಣವೂ ಆಗಿದೆ ಎಂದು ಮುಖ್ಯಮಂತ್ರಿಗಳ ಪತ್ರದಲ್ಲಿ ತಿಳಿಸಲಾಗಿದೆ.
ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ನಗರದ ತನಕ ವಿಸ್ತರಣೆ ಮಾಡಬೇಕು. ಇದರಿಂದಾಗಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಭಾಗದ ಸಂಚಾರಕ್ಕೆ ಸಹ ಅನುಕೂಲವಾಗಲಿದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವರಾದ ನಿಮಗೆ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಅವರು ಸಹ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಪತ್ರವನ್ನು ಬರೆದಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸ್ತಾವನೆ ಕುರಿತು ಆಲೋಚಿಸಿ ಎಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಧಾರವಾಡ-ಬೆಳಗಾವಿ ನಡುವೆ ನೇರ ರೈಲು ಮಾರ್ಗ ಇಲ್ಲದ ಕಾರಣ ಬೆಳಗಾವಿಗೆ ವಂದೇ ಭಾರತ್ ರೈಲು ವಿಸ್ತರಣೆ ಮಾಡಿಲ್ಲ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಆದರೂ ಸಹ ಬೆಳಗಾವಿ-ಬೆಂಗಳೂರು ಸಂಪರ್ಕಿಸಲು ರೈಲು ಓಡಿಸಬೇಕು ಎಂಬ ಒತ್ತಾಯ ಕೇಳಿಬರುತ್ತಲೇ ಇದೆ.
ಮೈಸೂರು-ಚೆನ್ನೈ ವಯಾ ಬೆಂಗಳೂರು ನಡುವೆ ಕರ್ನಾಟಕದ ಮೊದಲ ವಂದೇ ಭಾರತ್ ರೈಲು 2022ರಲ್ಲಿ ಸಂಚಾರ ಆರಂಭಿಸಿತು. ಬಳಿಕ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲು ಆರಂಭವಾಯಿತು. ಬಳಿಕ 3ನೇ ರೈಲಾಗಿ ಕಾಚಿಗುಡ-ಯಶವಂತಪುರ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ.












Click it and Unblock the Notifications