ಫೋನ್ ಸ್ವಿಚ್ ಆಫ್ ಮಾಡಿದ್ದಕ್ಕೆ, ಮದುವೆಯಾಗುವವಳನ್ನೇ ಕೊಂದ
ಬೆಳಗಾವಿ, ಡಿಸೆಂಬರ್ 11: ತಾನು ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಇದ್ದಿದ್ದರಿಂದ ಕೋಪಗೊಂಡ ಭಾವಿ ಪತಿಯೊಬ್ಬ, ತನ್ನ ಮದುವೆಯಾಗುವವಳನ್ನು ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುಜನಟ್ಟಿ ಗ್ರಾಮದಲ್ಲಿ ನಡೆದಿದೆ.
ಗುಜನಟ್ಟಿ ಗ್ರಾಮದ ತೋಟದ ನಿವಾಸಿ ಸಿದ್ದಾರೂಢ ಲಕ್ಷ್ಮಣ ಬಂಡ್ರೋಳಿ ಎಂಬುವವರ ಪುತ್ರಿ ನಿಂಗವ್ವ ಕೊಲೆಯಾದವಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಸವದತ್ತಿ ತಾಲ್ಲೂಕಿನ ಮುಗಳಿಯಾಳ ಗ್ರಾಮದ ರಮೇಶ್ ಲಕ್ಷ್ಮಣ ಕತ್ತಿ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.
ಸವದತ್ತಿ ತಾಲ್ಲೂಕಿನ ಮುಗಳಿಯಾಳ ಗ್ರಾಮದ ರಮೇಶ್ ಲಕ್ಷ್ಮಣ ಕತ್ತಿ ಎಂಬಾತನೊಂದಿಗೆ ಒಂದು ವರ್ಷದ ಹಿಂದೆ ನಿಂಗವ್ವ ಸಿದ್ದಾರೂಢ ಬಂಡ್ರೋಳಿ ಅವಳ ವಿವಾಹವನ್ನು ಎರಡೂ ಮನೆಯವರು ನಿಶ್ಚಯ ಮಾಡಿದ್ದರು.

ಯುವಕ ಫೋನ್ ನಲ್ಲಿ ಯಾವಾಗಲೂ ಯುವತಿ ಜೊತೆ ಮಾತನಾಡುತ್ತಿದ್ದ, ಡಿ.09 ರಂದು ನಿಂಗವ್ವಳಿಗೆ ಫೋನ್ ಮಾಡಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದ ಕೋಪಗೊಂಡ ಯುವಕ ರಮೇಶ್ ಯುವತಿಯ ಮನೆಗೆ ಬಂದಿದ್ದಾನೆ. ಆಗ ನಿಂಗವ್ವ ಬೇರೆಯವರ ಮನೆಗೆ ಹೋಗಿದ್ದಳು.
ಈ ಸಂಗತಿ ತಿಳಿದು ಮತ್ತಷ್ಟು ಕೋಪಗೊಂಡ ರಮೇಶ್, ಯುವತಿಯನ್ನು ಆಕೆಯ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆಗ ನಿಂಗವ್ವಳ ಕುತ್ತಿಗೆಗೆ ವೈರ್ ನಿಂದ ಬಿಗಿದು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಯುವತಿ ತಂದೆ ಮೂಡಲಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಮೇಶ್ ನನ್ನು ಬಂಧಿಸಿದ್ದಾರೆ.












Click it and Unblock the Notifications