ಸಿದ್ದರಾಮಯ್ಯ ಸಂಪುಟ; ಬೆಳಗಾವಿಗೆ 3 ಸಚಿವ ಸ್ಥಾನ?
ಬೆಳಗಾವಿ, ಮೇ 19; ಕರ್ನಾಟಕದ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ. ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈಗ ಸಚಿವ ಸಂಪುಟ ವಿಸ್ತರಣೆಯ ಪ್ರಶ್ನೆ ಎದುರಾಗಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ 135 ಶಾಸಕರು ಜಯಗಳಿಸಿದ್ದಾರೆ. ಗೆದ್ದವರಲ್ಲಿ ಬಹುತೇಕರು ಹಿರಿಯ ಶಾಸಕರು. ಆದ್ದರಿಂದ ಸಂಪುಟದಲ್ಲಿ ಅವರಿಗೆ ಸ್ಥಾನ ನಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಿಎಂ ಯಾರು? ಎಂಬುವುದಕ್ಕಿಂತ ಜಟಿಲ ಸಮಸ್ಯೆ ಇದಾಗಿದೆ.

ಹೈಕಮಾಂಡ್ ಅಧಿಕಾರ ಹಂಚಿಕೆ ಸೂತ್ರದ ಅನ್ವಯ ಸಿದ್ದರಾಮಯ್ಯ ಬಣದ 10 ಶಾಸಕರು, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಣದ 10 ಶಾಸಕರಿಗೆ ಮಂತ್ರಿಗಿರಿ ಸಿಗಲಿದೆ. ಉಳಿದ ಸ್ಥಾನಗಳನ್ನು ಯಾರಿಗೆ ನೀಡಬೇಕು? ಎಂದು ಹೈಕಮಾಂಡ್ ನಾಯಕರು ತೀರ್ಮಾನ ಮಾಡಲಿದ್ದಾರೆ.
ಬೆಳಗಾವಿಗೆ ಮೂರು ಸಚಿವ ಸ್ಥಾನ; ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೂತನ ಸಚಿವರ ಪಟ್ಟಿ ಹಿಡಿದು ದೆಹಲಿಗೆ ಹಾರಿದ್ದಾರೆ. ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆದು ಅವರು ಪಟ್ಟಿಯನ್ನು ಶುಕ್ರವಾರವೇ ಅಂತಿಮಗೊಳಿಸಿಕೊಂಡು ವಾಪಸ್ ಆಗುವ ಸಾಧ್ಯತೆ ಇದೆ.

ಬೆಂಗಳೂರು ನಗರ ಹೊರತುಪಡಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಬೆಳಗಾವಿ. ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದ್ದರಿಂದ ಸಂಪುಟದಲ್ಲಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಇದೆ.
ಸತೀಶ್ ಜಾರಕಿಹೊಳಿ ಪಕ್ಷದ ಹಿರಿಯ ನಾಯಕರು. ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ ಮತ್ತು ಕೆಪಿಸಿಸಿಯ ಕಾರ್ಯಾಧ್ಯಕ್ಷರು. ಆದ್ದರಿಂದ ಅವರಿಗೆ ಸಚಿವ ಸ್ಥಾನ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಲಕ್ಷ್ಮೀ ಹೆಬ್ಬಾಳ್ಕರ್ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಲಿಂಗಾಯತ ಮತ್ತು ಮಹಿಳಾ ಕೋಟಾದಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಈ ಬಾರಿಯ ಚುನಾವಣೆಯಲ್ಲಿಯೂ ಅವರರು 56,016 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಸಚಿವ ಸ್ಥಾನ ಸಿಗಲಿದೆ ಎಂಬುದು ಲೆಕ್ಕಾಚಾರವಾಗಿದೆ.
ಅಥಣಿಯ ಶಾಸಕ ಲಕ್ಷ್ಮಣ ಸವದಿ 2018ರ ಚುನಾವಣೆಯಲ್ಲಿ ಸೋತ ಬಳಿಕ ಸಚಿವರಾಗಿದ್ದರು. ವಿಧಾನ ಪರಿಷತ್ ಸದಸ್ಯರಾಗಿದ್ದರು. ಉಪಮುಖ್ಯಮಂತ್ರಿಯೂ ಆಗಿದ್ದರು. ಈ ಬಾರಿ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ನಾಯಕರಿಗೆ ತಮ್ಮ ಬಲ ಏನು? ಎಂದು ಅವರು ತೋರಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಬಣದಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು? ಎಂದು ಅವರೇ ತೀರ್ಮಾನ ಕೈಗೊಳ್ಳುತ್ತಾರೆ. ಹೈಕಮಾಂಡ್ ಅದಕ್ಕೆ ಅನುಮೋದನೆ ನೀಡಲಿದೆ. ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್ ನಾಯಕರು ಎಷ್ಟು ಕಷ್ಟಪಟ್ಟರೂ ಸಂಪುಟ ವಿಸ್ತರಣೆಗೆ ಸಹ ಅಷ್ಟೇ ಸವಾಲು ಎದುರಾಗಲಿದೆ.
ದೆಹಲಿಯಲ್ಲಿರುವ ಹಿರಿಯ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಉಪಮುಖ್ಯಮಂತ್ರಿ ಹುದ್ದೆ ಸಹ ಒಂದೇ ಆಗಿರುವುದರಿಂದ ಕೆಲವು ಹಿರಿಯ ಶಾಸಕರು ಅಸಮಾಧಾನಗೊಂಡಿದ್ದಾರೆ.
ಬೆಳಗಾವಿ ಬಿಟ್ಟರೆ ಬೆಂಗಳೂರು ನಗರಕ್ಕೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಇದೆ. ರಾಮಲಿಂಗಾ ರೆಡ್ಡಿ, ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಹಿರಿಯ ಶಾಸಕರು ಸಿದ್ದರಾಮಯ್ಯ ಸಂಪುಟ ಸೇರುವ ನಿರೀಕ್ಷೆ ಇದೆ.












Click it and Unblock the Notifications