ಈ ಬಾರಿ ಮೋದಿ ಅಲೆ ಇಲ್ಲ: ಸತೀಶ್ ಜಾರಕಿಹೊಳಿ
ಬೆಳಗಾವಿ, ಮಾರ್ಚ್ 24:ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಸಾಧುನವರ ಹೆಸರು ಘೋಷಣೆಯಾಗಿದೆ. ನಮ್ಮ ಕೆಲಸ ಮಾಡಿದ್ದೇವೆ, ಇನ್ನು ಅಭ್ಯರ್ಥಿಗಳ ಮೇಲೆ ಹೆಚ್ಚಿನ ಕೆಲಸವಿದೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಾರಿ ಯಾವುದೇ ಮೋದಿ ಅಲೆ ಇಲ್ಲ.ಕಳೆದ ಬಾರಿ ನೀಡಿದ ವಾಗ್ದಾನಗಳನ್ನು ಮೋದಿ ಈಡೇರಿಸಿಲ್ಲ. ಹೀಗಾಗಿ ನಮಗೆ ಹೆಚ್ಚಿನ ಅನುಕೂಲವಿದೆ. ಕಳೆದ ಬಾರಿ ಚಿಕ್ಕೋಡಿ ಗೆದ್ದು, ಬೆಳಗಾವಿ ಕಳೆದುಕೊಂಡಿದ್ವಿ. ಆದರೆ ಈ ಬಾರಿ ಚಿಕ್ಕೋಡಿ ಉಳಿಸಿಕೊಳ್ಳುವ ಜೊತೆಗೆ ಬೆಳಗಾವಿ ಲೋಕಸಭೆ ಗೆಲ್ಲುವ ಪ್ರಯತ್ನ ಮಾಡಲಾಗುವುದು ಎಂದರು.
ಬಿಜೆಪಿಯವರು ಕೇವಲ ಕಾಶ್ಮೀರ ವಿಚಾರ ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ವಿಚಾರಗಳಿಲ್ಲ ಎಂದು ಲೇವಡಿ ಮಾಡಿದ ಸತೀಶ್ ಜಾರಕಿಹೊಳಿ, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸುರೇಶ ಅಂಗಡಿ ಕೊಡುಗೆ ಶೂನ್ಯ. ಕನಿಷ್ಠ ಸೌಜನ್ಯಕ್ಕಾದ್ರು ಅವರು ಕ್ಷೇತ್ರದಲ್ಲಿ ಸುತ್ತಾಡಬೇಕಿತ್ತು. ಚಿಕ್ಕೋಡಿಯ ಪ್ರಕಾಶ ಹುಕ್ಕೇರಿಯವರಿಗೆ ಹೋಲಿಕೆ ಮಾಡಿದರೆ ಮೂರು ಬಾರಿ ಗೆದ್ದಿರುವ ಸುರೇಶ ಅಂಗಡಿ ಸಾಧನೆ ಶೂನ್ಯ ಎಂದು ಆರೋಪಿಸಿದರು.

ಮೋದಿ ನೋಡಿ, ಬಿಜೆಪಿ ನೋಡಿ ವೋಟ್ ಹಾಕೋವ್ರು ಇದ್ದಾರೆ. ಆದ್ರೆ ಅದು ಗೆಲ್ಲಿಸುವಷ್ಟು ವರ್ಕೌಟ್ ಆಗಲ್ಲ.ಮೋದಿಯನ್ನ ಕಳೆದ ಬಾರಿ ಜನ ನೋಡಿ ಆಗಿದೆ. ಎರಡನೇ ಬಾರಿ ನೋಡುವ ಅವಶ್ಯಕತೆ ಇಲ್ಲ. ಮೋದಿ ಏನಾದ್ರು ದೊಡ್ಡ ಸಾಧನೆ ಮಾಡಿದ್ರೆ ಜನ ವೋಟ್ ಮಾಡ್ತಿದ್ರು ಎಂದು ಜಾರಕಿಹೊಳಿ ತಿಳಿಸಿದರು.
ರಮೇಶ ಜಾರಕಿಹೊಳಿ ಪಕ್ಷದಲ್ಲಿದ್ದಾರೆ. ಅವರು ಕೆಲಸ ಮಾಡ್ತಾರೆ. ಅವರನ್ನು ಭೇಟಿಯಾಗಲು ಇದುವರೆಗೆ ಸಾಧ್ಯವಾಗಿಲ್ಲ. ಅವರ ಕಾರ್ಯಕರ್ತರು ನಮ್ಮ ಸಂಪರ್ಕದಲ್ಲಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರು ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಅದರಲ್ಲಿ ಒಬ್ಬರಿಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ವಂಚಿತ ಸಿದ್ನಾಳ ಅವರಿಗೆ ಇನ್ನು ವಯ್ಯಸ್ಸಿದೆ. ಅವರು ಇನ್ನು ಪ್ರಾರಂಭಿಕ ಹಂತದಲ್ಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.












Click it and Unblock the Notifications