ಶಾವಿಗೆ ಒಣಗಲು ಹಾಕಿ ಕೆಲಸದಿಂದ ವಜಾಗೊಂಡಿದ್ದ ಮಹಿಳೆ ಮರುನೇಮಕ
ಬೆಳಗಾವಿ, ಜೂನ್ 4: ಬೆಳಗಾವಿಯ ಸುವರ್ಣ ಸೌಧದ ಎದುರಿನ ಮೆಟ್ಟಿಲಿನ ಮೇಲೆ ಶಾವಿಗೆ ಒಣಗಲು ಹಾಕಿದ್ದ ಕಾರಣಕ್ಕೆ ಕೆಲಸದಿಂದ ವಜಾಗೊಂಡಿದ್ದ ಮಲ್ಲಮ್ಮ ಮತ್ತು ಸಾಂವಕ್ಕ ಇಬ್ಬರನ್ನೂ ಕೆಲಸಕ್ಕೆ ಮರು ನೇಮಕ ಮಾಡಿ ಜಿಲ್ಲಾಡಳಿತ ಆದೇಶ ಮಾಡಿದೆ. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಈ ವಿಚಾರ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಬೆಳಗಾವಿ ಸುರ್ವಣಸೌಧ ಅಂಗಳದಲ್ಲಿ ಶಾವಿಗೆ ಒಣಗಿಸಲು ಹಾಕಿದ್ದ ಫೋಟೋಗಳು ವೈರಲ್ ಆಗಿದ್ದವು. ರಾಜ್ಯದ ಎರಡನೇ ಶಕ್ತಿಸೌಧಕ್ಕೆ ಪೊಲೀಸ್ ಭದ್ರತೆ ಇದ್ದರೂ ಈ ರೀತಿ ಆಗಿದ್ದು ಸರ್ಕಾರಕ್ಕೆ ಮುಜುಗರ ತಂದಿತ್ತು.
400 ಕೋಟಿ ವೆಚ್ಚದ ಸುವರ್ಣ ಸೌಧ ಸರಿಯಾಗಿ ಬಳಕೆಯಾಗುತ್ತಿಲ್ಲ ಎನ್ನುವ ಅಸಮಾಧಾನ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಈಗ ನಡೆದ ಈ ಘಟನೆಯಿಂದ ಜನ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಆಡಿಕೊಳ್ಳುವಂತಾಗಿತ್ತು. ಫೋಟೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಸ್ಥಳಕ್ಕೆ ದೌಡಾಯಿಸಿದ್ದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸುವರ್ಣಸೌಧಕ್ಕೆ ಭೇಟಿ ನೀಡಿ ಇಬ್ಬರು ಮಹಿಳೆಯರನ್ನು ವಿಚಾರಣೆ ನಡೆಸಿದ್ದರು. ಶಾವಿಗೆ ಒಣಗಿಸಲು ಹಾಕಿದ್ದ ಮಹಿಳೆಯರ ವಿರುದ್ಧ ಕ್ರಮ ಕೈಗೊಂಡು ಕೆಲಸದಿಂದ ವಜಾ ಮಾಡಿದ್ದರು. ಇದರಿಂದ ಸಮಸ್ಯೆ ಸರಿಹೋಯಿತು ಎಂದು ಸುಮ್ಮನಾಗಿದ್ದರು.

ಮಹಿಳೆಯರ ವಜಾ ವಿರುದ್ಧ ಆಕ್ರೋಶ
ಆದರೆ ಯಾವಾಗ ಮಹಿಳೆಯರನ್ನು ವಜಾಗೊಳಿಸದ್ದಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೋ ಅಧಿಕಾರಿಗಳಿಗೆ ತಾವು ಮಾಡಿದ ತಪ್ಪಿನ ಅರಿವಾಗಿದೆ. ವಿಧಾನಸೌಧದಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿದವರ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳಲಾಗದವರು, ಬಡ ಮಹಿಳೆಯರ ಕೆಲಸ ಕಿತ್ತುಕೊಂಡು ಅವರ ಅನ್ನಕ್ಕೆ ಕಲ್ಲಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸುದ್ದಿವಾಹಿನಿಗಳಲ್ಲೂ ದಿನಗೂಲಿ ನೌಕರರ ವಜಾ ಮಾಡಿದ್ದರ ಕುರಿತು ವರದಿ ಪ್ರಸಾರ ಮಾಡಿದ್ದರು. ಗುತ್ತಿಗೆದಾರರನ್ನು ಬಿಟ್ಟು ಬಡಪಾಯಿ ದಿನಗೂಲಿ ನೌಕರರ ಮೇಲೆ ಕ್ರಮ ತೆಗೆದುಕೊಂಡಿದ್ದಕ್ಕೆ ಟೀಕೆಗಳು ವ್ಯಕ್ತವಾದವು. ಯಾವಾಗ ಟೀಕೆಗಳು ಹೆಚ್ಚಾದವೋ ಕೂಡಲೇ ಎಚ್ಚೆತ್ತ ಅಧಿಕಾರಿಗಳು ಟೀಕೆಗಳಿಂದ ತಪ್ಪಿಸಿಕೊಳ್ಳಲು ವಜಾಗೊಂಡ ದಿನಗೂಲಿ ನೌಕರರನ್ನು ಮರು ನೇಮಕ ಮಾಡಿ ಆದೇಶಿಸಲಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ವಿಶೇಷ ಕಾಳಜಿಯಿಂದಾಗಿ ದಿನಗೂಲಿ ನೌಕರೆ ಮಲ್ಲಮ್ಮಳಿಗೆ ಆಶ್ರಯ ಯೋಜನೆಯಡಿ ಮನೆ ಮಂಜೂರಾಗಿದೆ. ಶಾವಗಿಯಿಂದ ಮಲ್ಲಮ್ಮಳಿಗೆ ಮನೆ ಭಾಗ್ಯ ದೊರಕಿದ್ದು, ಮನೆ ನಿರ್ಮಾಣ ಮಾಡಿಕೊಡಲು ಬಸ್ತವಾಡ ಗ್ರಾಮ ಪಂಚಾಯಿತಿ ಪಿಡಿಒ ಪ್ರಕ್ರಿಯೆ ಆರಂಭಿಸಿದ್ದಾರೆ.











Click it and Unblock the Notifications