ಬಿಜೆಪಿ ಜೆಡಿಎಸ್ ಮತ್ತೆ ಒಂದಾಗುತ್ತಾ? ಸುರೇಶ್ ಅಂಗಡಿ ಅಂಥದ್ದೇನು ಹೇಳಿದ್ರು?
ಬೆಳಗಾವಿ, ಅಕ್ಟೋಬರ್ 28: ಬಿಜೆಪಿ ಸರ್ಕಾರ ಇರಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಿಜೆಪಿ ಸರ್ಕಾರವನ್ನು ಬೆಂಬಲಿಸುವಂತೆ ಮಾತನಾಡಿರುವ ಎಚ್ ಡಿಕೆ ಮಾತಿಗೆ ಪ್ರತಿಕ್ರಿಯೆ ನೀಡುವ ಮೂಲಕ ಬೆಳಗಾವಿಯಲ್ಲಿ ಕೇಂದ್ರ ರೈಲ್ವೆ ಸಚಿವ ಸರೇಶ ಅಂಗಡಿ ಸುಳಿವು ನೀಡಿದ್ದಾರೆ.
"ಈ ಹಿಂದೆ ಬಿಜೆಪಿ ಜೆಡಿಎಸ್ 20-20 ಸರ್ಕಾರ ಮಾಡಿದ್ದೆವು. ಬಿಜೆಪಿ ಜೊತೆ ಸರ್ಕಾರ ಮಾಡಿದ್ರೆ ಎಷ್ಟು ಒಳ್ಳೆಯ ಅಭಿವೃದ್ಧಿ ಆಗುತ್ತದೆ ಅನ್ನೋದು ಗೊತ್ತಿದೆ. ಹೀಗಾಗಿ ಯಡಿಯೂರಪ್ಪನವರ ಸರ್ಕಾರ ಇರಬೇಕು" ಎಂದು ಕುಮಾರಸ್ವಾಮಿ ಹೇಳಿದ್ದರು.
ಬೆಳಗಾವಿಯಲ್ಲಿ ಮಾತನಾಡಿದ ಸುರೇಶ್ ಅಂಗಡಿ, "ಬಿಜೆಪಿ ಪ್ರಜಾಪ್ರಭುತ್ವ ಪಕ್ಷ. ಪಕ್ಷ ಒಂದು ಕುಟುಂಬ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಬಿಜೆಪಿ ಒಂದು ಟ್ರೇನ್ ಇದ್ದಹಾಗೆ. ಈ ಟ್ರೇನ್ ನಲ್ಲಿ ಯಾರು ಹತ್ತುತ್ತಾರೋ ಅವರನ್ನು ಹತ್ತಿಸಿಕೊಂಡು ಹೋಗುತ್ತದೆ. ದೇಶ ಮತ್ತು ರಾಜ್ಯದ ಹಿತ ದೃಷ್ಟಿಯಿಂದ ಬಿಜೆಪಿ ಕೆಲಸ ಮಾಡುತ್ತಿದೆ" ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಬೆಂಬಲಿಸಿದರೆ ಬಿಜೆಪಿ ಸ್ವಾಗತಿಸಲಿದೆ ಎಂದಿದ್ದಾರೆ.

ಇದೇ ಸಮಯದಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಸಿದ್ದರಾಮಯ್ಯನವರು ಒರಿಜಿನಲ್ ಕಾಂಗ್ರೆಸ್ಸಿಗರಲ್ಲ. ಜಯಪ್ರಕಾಶ್ ನಾರಾಯಣ್ ಜೊತೆಗೆ ಸೇರಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದವರು. ಇವತ್ತು ರಾಜಕೀಯ ನೆಲೆ ಬೇಕಾಗಿರುವುದರಿಂದ ಇಟಾಲಿಯನ್ ಕಾಂಗ್ರೆಸ್ ಶರಣಕ್ಕೆ ಹೋಗಿದ್ದಾರೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಪಕ್ಷ ಇದು ಅಲ್ಲ. ಈಗಿನ ಕಾಂಗ್ರೆಸ್ ಮತ್ತೊಂದು ಈಸ್ಟ್ ಇಂಡಿಯಾ ಕಂಪನಿ. ಇದರ ಬಗ್ಗೆ ಸಿದ್ದರಾಮಯ್ಯನವರೇ ಆತ್ಮಾವಲೋಕಣ ಮಾಡಿಕೊಳ್ಳಬೇಕಿದೆ" ಎಂದಿದ್ದಾರೆ.












Click it and Unblock the Notifications