ಸವದತ್ತಿ ಯಲ್ಲಮ್ಮ ದೇವಾಲಯದ ಹುಂಡಿ ಎಣಿಕೆ ಕಾರ್ಯ: ಬರದ ನಡುವೆಯೂ ಭರಪೂರ ಕಾಣಿಕೆ
ಬೆಳಗಾವಿ, ಮಾರ್ಚ್ 30: ಕರ್ನಾಟಕದ ಪ್ರಸಿದ್ಧ ಶಕ್ತಿ ಪೀಠ, ದಕ್ಷಿಣ ಭಾರತದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಈ ವರ್ಷ ಭರಪೂರ ಕಾಣಿಕೆ ಹರಿದು ಬಂದಿದೆ. ರಾಜ್ಯದಲ್ಲಿ ಬರದ ನಡುವೆಯೂ ದೇವಾಲಯದಲ್ಲಿ ಸಂಗ್ರಹವಾದ ಕಾಣಿಕೆಯಲ್ಲಿ ಹಿಂದಿನ ವರ್ಷಕ್ಕಿಂತ 2 ಕೋಟಿ ರೂಪಾಯಿ ಹೆಚ್ಚಳವಾಗಿದೆ.
ಯಲ್ಲಮ್ಮನಗುಡ್ಡ ದೇವಾಲಯದಲ್ಲಿ 2023 ಮತ್ತು 24ರ ಸಾಲಿನಲ್ಲಿ ಒಟ್ಟು 11.23 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 2.40 ಕೋಟಿ ರೂಪಾಯಿ ಕಾಣಿಕೆ ಹೆಚ್ಚಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. 2022-23ರಲ್ಲಿ 8.01 ಕೋಟಿ ರೂಪಾಯಿ ನಗದು, 66.28 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 15.43 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳು ಸೇರಿದಂತೆ ಒಟ್ಟು 8.83 ಕೋಟಿ ಮೌಲ್ಯದ ಕಾಣಿಕೆಯನ್ನು ಭಕ್ತರು ಯಲ್ಲಮ್ಮ ದೇವಿಗೆ ಅರ್ಪಿಸಿದ್ದರು.

ಸವದತ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಯಲ್ಲಮ್ಮ ದೇವಿಯ ಆಶೀರ್ವಾದ ಪಡೆಯಲು ಕರ್ನಾಟಕ ಮಾತ್ರವಲ್ಲದೇ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ದೇವಿಗೆ ಹರಕೆ ರೂಪದಲ್ಲಿ ಭಕ್ತರು ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹುಂಡಿಯಲ್ಲಿ ಹಾಕಿ ಸಮರ್ಪಿಸುತ್ತಾರೆ.
ಈ ಬಾರಿ 2023-24ರಲ್ಲಿ 10.22 ಕೋಟಿ ರೂಪಾಯಿ ನಗದು, 84.14 ಲಕ್ಷ ಚಿನ್ನ ಮತ್ತು 16.65 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಹುಂಡಿಯಲ್ಲಿ ಸಂಗ್ರಹವಾಗಿದ್ದು, ಕೆನಡಾ, ಸೌದಿ ಅರೇಬಿಯಾ ದೇಶಗಳ ನೋಟ್ಗಳು ಕೂಡ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿವೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಇನ್ನು ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಇರುವುದರಿಂದ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡುವವ ಸಂಖ್ಯೆ ಕಳೆದ ಒಂದು ವರ್ಷಗಳಲ್ಲಿ ಹೆಚ್ಚಾಗಿದೆ. ಈ ಪೈಕಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಬೇಸಿಗೆ ರಜೆ ಹಾಗೂ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಒಂದೇ ವಾರದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.












Click it and Unblock the Notifications