ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರಾಠಿ ನಾಮಫಲಕ : ಎಳ್ಳೂರಲ್ಲಿ ಎಂಇಎಸ್ ಪುಂಡಾಟಿಕೆ

By Prasad
|
Google Oneindia Kannada News

ಬೆಳಗಾವಿ/ಬೆಂಗಳೂರು, ಜು. 26 : ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸುವ ದಾರ್ಷ್ಟ್ಯವನ್ನು ತೋರಿದೆ. ಬೆಳಗಾವಿ ತಾಲೂಕಿನ ಎಳ್ಳೂರು ಮಹಾರಾಷ್ಟ್ರಕ್ಕೆ ಸೇರಿದೆ ಎಂಬ ಫಲಕವನ್ನು ಶನಿವಾರ ಮರುಸ್ಥಾಪಿಸುವ ಮುಖಾಂತರ ಇಡೀ ಕರ್ನಾಟಕ ರಾಜ್ಯಕ್ಕೆ ಮತ್ತು ಕನ್ನಡಿಗರಿಗೆ ಸವಾಲು ಒಡ್ಡಿದ್ದಾರೆ.

ಕರ್ನಾಟಕದ ಹೈಕೋರ್ಟಿನ ಆದೇಶದಂತೆ 'ಮಹಾರಾಷ್ಟ್ರ ರಾಜ್ಯ ಎಳ್ಳೂರು' ಎಂಬ ಮರಾಠಿಯಲ್ಲಿದ್ದ ನಾಮಫಲಕವನ್ನು ಜಿಲ್ಲಾಡಳಿತ ಕಿತ್ತೊಗೆಯಲಾಗಿತ್ತು. ಜು.28ರೊಳಗೆ ಫಲಕವನ್ನು ಕಿತ್ತೊಗೆಯಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಅದರಂತೆ, ಜು.25ರಂದು ಶುಕ್ರವಾರ ಜಿಲ್ಲಾಡಳಿತ ನಾಮಫಲಕವನ್ನು ಒಡೆಸಿಹಾಕಿತ್ತು.

ಭೀಮಪ್ಪ ಗಡದ್ ರಿಟ್ : ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗುಂಡಪ್ಪ ಗಡದ್ ಎಂಬುವವರು ಮರಾಠಿ ನಾಮಫಲಕ ತೆಗೆಸಬೇಕೆಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾ. ಎಚ್.ಜಿ. ರಮೇಶ್ ಅವರಿದ್ದ ವಿಭಾಗೀಯ ಪೀಠ ಗಡದ್ ಅವರ ಪರವಾಗಿ ಆದೇಶ ಹೊರಡಿಸಿತ್ತು.

Marathi people insult Kannada in Ellur, Belgaum

ಮರಾಠಿಗರ ಪುಂಡಾಟಿಕೆ : ಇದರ ವಿರುದ್ಧ ಇಡೀ ಊರಿಗೆ ಊರೇ ತಿರುಗಿ ನಿಂತಿದೆ. ಪುಂಡರು, ಪೋಕರಿಗಳು, ಮಕ್ಕಳು, ಮಹಿಳೆಯರು ಸೇರಿದಂತೆ ಎಳ್ಳೂರಿನ ಗ್ರಾಮಸ್ಥರು ಕೋಲು, ದೊಣ್ಣೆ, ಕಲ್ಲುಗಳನ್ನು ಹಿಡಿದುಕೊಂಡು, ಭದ್ರತೆಗೆಂದು ಬಂದಿದ್ದ ಕರ್ನಾಟಕ ಮೀಸಲು ಪಡೆಯ ಪೊಲೀಸರನ್ನೇ ಹಿಮ್ಮೆಟ್ಟಿಸಿದ್ದಾರೆ. ಅವರ ಮೇಲೆ ಕಲ್ಲು ತೂರುತ್ತ ಪೊಲೀಸರೇ ಪರಾರಿಯಾಗುವಂತೆ ಮಾಡಿದ್ದಾರೆ. ಅಲ್ಲದೆ, ನಾಮಫಲಕ ಮತ್ತೆ ನಿರ್ಮಿಸಿ, ಹಾರ ಹಾಕಿ ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ರಸ್ತೆಯಲ್ಲಿ ಕಲ್ಲು, ಮರಗಳನ್ನು ಹಾಕಿ ರಸ್ತೆಗೆ ತಡೆಯೊಡ್ಡಿದ್ದಾರೆ.

ಸಿದ್ದು ಏನು ಮಾಡುತ್ತಿದ್ದಾರೆ? : ರಾಜ್ಯ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಸಿದ್ದರಾಮಯ್ಯನವರು ಏನು ಮಾಡುತ್ತಿದ್ದಾರೆ? ಪೊಲೀಸ್ ಮಹಾನಿರ್ದೇಶಕ ಪಚಾವೋ ಏನು ಮಾಡುತ್ತಿದ್ದಾರೆ? ಬೆಳಗಾವಿಯ ಕನ್ನಡಪರ ಹೋರಾಟಗಾರರು ಏನು ಮಾಡುತ್ತಿದ್ದಾರೆ? ಬೆಳಗಾವಿ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದಾರೆ? ಈ ಮರಾಠಿ ಪುಂಡರ ಅಟ್ಟಹಾಸ ತಡೆಗಟ್ಟಲು ಇವರಿಗೆ ಸಾಧ್ಯವಿಲ್ಲವೆ?


ಬೆಂಗಳೂರಿನಲ್ಲಿ ಪ್ರತಿಭಟನೆ : ಎಳ್ಳೂರಿನಲ್ಲಿ ನಡೆದ ಅವಮಾನಕರ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕನ್ನಡಪರ ಸಂಘಟನೆಗಳು ಬೆಂಗಳೂರಿನ ಮೈಸೂರು ವೃತ್ತದಲ್ಲಿ, ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದವು. ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆ ಹೀಗೇ ಮುಂದುವರಿದರೆ ಮರಾಠಿಗರೆಲ್ಲ ಬೆಳಗಾವಿ ಬಿಟ್ಟು ಹೋಗಬೇಕಾಗುತ್ತದೆ ಎಂದು ವಾಟಾಳ್ ಗುಡುಗಿದರು.

ಕನ್ನಡಕ್ಕೆ ಮಾಡುತ್ತಿರುವ ಅವಮಾನವನ್ನು ನಿಲ್ಲಿಸದಿದ್ದರೆ ಕರ್ನಾಟಕದ ಗಡಿಯಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು. ಮಹಾರಾಷ್ಟ್ರದ ಯಾವುದೇ ವಾಹನ ಒಳಬರಲು ಅವಕಾಶ ನೀಡುವುದಿಲ್ಲ ಎಚ್ಚರ ಎಚ್ಚರ ಎಂದು ಎಚ್ಚರಿಸಿರುವ ಅವರು, ಜು.31ರಂದು ಕರೆಯಲಾಗಿರುವ ಬಂದ್ ಅತ್ಯಾಚಾರದ ವಿರುದ್ಧ ಮಾತ್ರವಲ್ಲ ಎಂಇಎಸ್ ಪುಂಡಾಟಿಕೆಯ ವಿರುದ್ಧವೂ ಆಚರಿಸಲಾಗುತ್ತದೆ ಎಂದು ಹೇಳಿದರು.

ಮರಾಠಿ ನಾಮಫಲಕ ತೆರವು ಮಾಡಿದ್ದನ್ನು ವಿರೋಧಿಸಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿಯೂ ಶುಕ್ರವಾರ ಮರಾಠಿಗರು ಪ್ರತಿಭಟನೆ ನಡೆಸಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಕಲ್ಲು ತೂರಿ, ಗಾಜು ಪುಡಿಪುಡಿ ಮಾಡಿ ಪ್ರತಿರೋಧ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ರೊಚ್ಚಿಗೆದ್ದಿರುವ ಕನ್ನಡಪರ ಸಂಘಟನೆಗಳು ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿವೆ.

ಧಾರವಾಡದಲ್ಲಿ ಮಹಾರಾಷ್ಟ್ರ ಬ್ಯಾಂಕ್ ಮೇಲೆ ದಾಳಿ : ಮರಾಠಿಗರ ಪುಂಡಾಟಿಕೆಯಿಂದ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಧಾರವಾಡದ ರೀಗಲ್ ಸರ್ಕಲ್ ನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಮಹಾರಾಷ್ಟ್ರ ಬ್ಯಾಂಕ್ ಮೇಲೆ ಕನ್ನಡಪರ ಹೋರಾಟಗಾರರು ದಾಳಿ ನಡೆಸಿದ್ದಾರೆ.

English summary
Maharashtra Ekikaran Samithi has retaliated and insulted Karnataka High Court by re-establishing Marathi name board, which says Ellur in Belgaum belongs to Maharashtra. Kannada organizations have condemned it and protested in Bangalore on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X