ಬರಗಾಲದಲ್ಲೂ ಕರ್ನಾಟಕಕ್ಕೆ 2.5 ಟಿಎಂಸಿ ನೀರೆರೆದ ಮಹಾರಾಷ್ಟ್ರ
ತಿಂಗಳಲ್ಲಿ ಎರಡನೇ ಬಾರಿಗೆ ಮಹಾರಾಷ್ಟ್ರ ಸರಕಾರ ತನ್ನ ಕೊಯ್ನಾ ಅಣೆಕಟ್ಟಿನಿಂದ ಕರ್ನಾಟಕಕ್ಕೆ 2.65 ಟಿಎಂಸಿ ನೀರು ನೀಡಿರುವುದಾಗಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಬೆಳಗಾವಿ, ಮೇ 11: ತೀವ್ರ ಬರಗಾಲದ ನಡುವೆ ಕಳೆದ ಎರಡು ತಿಂಗಳಲ್ಲಿ ಮಹಾರಾಷ್ಟ್ರ ಸರಕಾರ ಕರ್ನಾಟಕಕ್ಕೆ ಎರಡು ಬಾರಿ ನೀರು ನೀಡಿ ಪುಣ್ಯ ಕಟ್ಟಿಕೊಂಡಿದೆ.
ಮಹಾರಾಷ್ಟ್ರ ತನ್ನ ಕೊಯ್ನಾ ಅಣೆಕಟ್ಟಿನಿಂದ ಕರ್ನಾಟಕಕ್ಕೆ 2.65 ಟಿಎಂಸಿ ನೀರು ನೀಡಿರುವುದಾಗಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
"ತಿಂಗಳಲ್ಲಿ ಎರಡನೇ ಬಾರಿಗೆ ಮಹಾರಾಷ್ಟ್ರ ಸರಕಾರ ನಮಗೆ 2.65 ಟಿಎಂಸಿ ನೀರನ್ನು ಕೊಯ್ನಾ ಅಣೆಕಟ್ಟಿನಿಂದ ಬಿಡುಗಡೆ ಮಾಡಿದೆ," ಎಂದು ಪಾಟೀಲ್ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಪಾಟೀಲ್ ನನಗೆ ಕರೆ ಮಾಡಿ ಕೊಯ್ನಾ ಅಣೆಕಟ್ಟಿನಿಂದ ನೀರು ಬಿಡುವಂತೆ ಕೇಳಿಕೊಂಡರು. ಅವರ ಮನವಿ ಮೇರೆಗೆ ನೀರು ನೀಡಿದ್ದೇವೆ," ಎಂದು ಮಹಾರಾಷ್ಟ್ರ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಹೇಳಿದ್ದಾರೆ.
ಇನ್ನು ಕೊಯ್ನಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ಮನವಿ ಸಲ್ಲಿಸಿದ್ದರು. ಅದರಂತೆ ನೀರು ನೀಡಿದ್ದಾರೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವಂತೆ ಅನಂತ್ ಕುಮಾರ್ ಬಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿಕೊಂಡಿದ್ದರು. ಸಿಎಂ ಕೋರಿಗೆ ಮೇರೆಗೆ ಅನಂತ್ ಕುಮಾರ್ ಕೂಡಾ ಫಡ್ನಾವೀಸ್ ಬಳಿ ನೀರು ನೀಡುವಂತೆ ಕೇಳಿಕೊಂಡಿದ್ದರು.
ಹೀಗೆ ಪಕ್ಷ ಭೇದ ಮರೆತು ಮಹಾರಾಷ್ಟ್ರ ಸರಕಾರವನ್ನು ಕೇಳಿಕೊಂಡು ಕರ್ನಾಟಕದ ಜನತೆ ಪಾಲಿಗೆ ರಾಜಕಾರಣಿಗಳು ನೀರು ತಂದಿದ್ದಾರೆ. ಈ ಹಿಂದೆ ಏಪ್ರಿಲ್ 13ರಂದು ಕೂಡ ಇದೇ ರೀತಿ ಮಹಾರಾಷ್ಟ್ರ ಸರಕಾರ 2.65 ಟಿಎಂಸಿ ನೀರು ಬಿಡುಗಡೆ ಮಾಡಿತ್ತು.
ಈ ಹಿಂದೆ ಎಂಬಿ ಪಾಟೀಲ್ ಮಹಾರಾಷ್ಟ್ರ ಸರಕಾರಕ್ಕೆ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲೇ ಅತೀ ಹೆಚ್ಚು ಬರಗಾಲವಿದೆ ಎಂಬುದನ್ನು ಮನವರಿಕೆ ಮಾಡಿದ್ದರು. ಕರ್ನಾಟಕದ ಕೋರಿಕೆಯನ್ನು ಅರ್ಥಮಾಡಿಕೊಂಡ ಮಹಾರಾಷ್ಟ್ರ ಇದೀಗ ನೀರು ಬಿಡುಗಡೆ ಮಾಡಿ ಪುಣ್ಯದ ಕೆಲಸ ಮಾಡಿದೆ.
ಈ ಬೆನ್ನಿಗೆ ಹೇಳಿಕೆ ನೀಡಿರುವ ಎಂಬಿ ಪಾಟೀಲ್ ಕರ್ನಾಟಕದ 12 ಅಣೆಕಟ್ಟುಗಳಲ್ಲಿ 9ರಲ್ಲಿ ಕೇವಲ 20 ಶೇಕಡಾ ನೀರಿದೆ ಎಂದು ಬರಗಾಲದ ತೀವ್ರತೆಯನ್ನು ಬಹಿರಂಗಪಡಿಸಿದ್ದಾರೆ.












Click it and Unblock the Notifications