Belagavi Politics: ಬಿಎಸ್‌ವೈ ಬೆನ್ನಿಗೆ ಚೂರಿ ಹಾಕಿದ್ದು ಸವದಿ; ಅವನ್ಯಾಂವ ಗಂಡ್ಸು: ರಮೇಶ್ ಜಾರಕಿಹೊಳಿ
ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ಮೇ 10ರಂದು ನಡೆಯುವ ಚುನಾವಣೆಗೆ ಮತದಾರರನ್ನು ಸೆಳೆಯಲು ಎಲ್ಲ ಅಭ್ಯರ್ಥಿಗಳು ಮತ್ತು ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ.
ಈ ಬೆಳಗಾವಿ ರಾಜಕಾರಣ ಮತ್ತೊಂದು ಮಜಲನ್ನು ತಲುಪಿದ್ದು, ಪಕ್ಷಗಳ ನಡುವಿನ ಹೋರಾಟಕ್ಕಿಂತ ವ್ಯಕ್ತಿಗತ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಬೆಳಗಾವಿ ಚುನಾವಣಾ ಕಣ ಇದೀಗ ವ್ಯಕ್ತಿ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ನಡುವಿನ ಕಾದಾಟ ಇಡೀ ರಾಜ್ಯದ ಗಮನ ಸೆಳೆದಿದೆ.

ಇಂದು (ಬುಧವಾರ, ಏಪ್ರಿಲ್ 26)ರಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರವಾಗಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗವಹಿಸಿದ್ದರು. ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಹಾಜರಿದ್ದರು.
ಈ ಸಂದರ್ಭದಲ್ಲಿ ಅಥಣಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. "ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರ ಬೆನ್ನಿಗೆ ಚೂರಿ ಹಾಕಿದ ವ್ಯಕ್ತಿ ಲಕ್ಷ್ಮಣ ಸವದಿ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಸಲು ಲಕ್ಷ್ಮಣ ಸವದಿ ಪಿತೂರಿ ನಡೆಸಿದರು," ಎಂದು ಕಿಡಿಕಾರಿದರು.

"ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಒಂದೊಳ್ಳೆಯ ಉದ್ದೇಶಕ್ಕಾಗಿ ಲಕ್ಷ್ಮಣ ಸವದಿಯವರನ್ನು ಡಿಸಿಎಂ ಮಾಡಿದ್ದರು. ಆತ ಪಂಚಾಯತಿ ಸದಸ್ಯನಾಗಲೂ ಲಾಯಕ್ಕಿರಲಿಲ್ಲ. ಉದ್ದಂಗಿ ಹಾಕಿಕೊಂಡು ಬರುತ್ತಿದ್ದಕ್ಕೆ ದೊಡ್ಡವನು ಅಂತಾ ತಿಳಿದಿದ್ದರು. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಗೆ ಲಕ್ಷ್ಮಣ ಸವದಿ ಮೋಸ ಮಾಡಿದ್ದಾನೆ," ಎಂದು ಹರಿಹಾಯ್ದರು.
ಬಿಜೆಪಿಯ ಯಡಿಯೂರಪ್ಪ, ಬಿ.ಎಲ್. ಸಂತೋಷ್ ಅವರಿಗೆ ಮೋಸ ಕಾಂಗ್ರೆಸ್ ಪಕ್ಷಕ್ಕೆ ಹೋಗಿರುವ ಲಕ್ಷ್ಮಣ ಸವದಿ, ಅಲ್ಲಿ ಇನ್ಯಾರಿಗೆ ದ್ರೋಹ ಬಗೆಯುತ್ತಾನೋ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಜೊತೆ ಸೇರಿ ಸಿದ್ದರಾಮಯ್ಯನನ್ನ ಮುಗಿಸುತ್ತಾನೆ ಎಂದು ರಮೇಶ್ ಜಾರಕಿಹೊಳಿ ಏಕವಚನದಲ್ಲಿ ಕಿಡಿಕಾರಿದರು.

"ನಾನು, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್ ಬಿಜೆಪಿಗೆ ಬಂದಿದ್ದಕ್ಕೆ ಲಕ್ಷ್ಮಣ ಸವದಿ ಡಿಸಿಎಂ ಆದ. ಅವ್ನು ಗಂಡಸಾಗಿದ್ರೆ ನಾವು ಬಂದಾಗಲೇ ವಿರೋಧ ಮಾಡಬೇಕಿತ್ತು. ಅವಾಗ ಸುಮ್ಮನಿದ್ದು, ಈಗ ಟಿಕೆಟ್ ಸಿಗದಿದ್ದಕ್ಕೆ ಕಾಂಗ್ರೆಸ್ ಹೋಗಿದ್ದಾನೆ. ಅಂವ ಎಂತ ಗಂಡ್ಸಿದಾನೆ," ಎಂದು ಲಕ್ಷ್ಮಣ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಲಕ್ಷ್ಮಣ ಸವದಿ ಸೋಲಿಸುವ ಜವಾಬ್ದಾರಿ ನಿಮ್ಮದು ಎಂದ ಬಿಎಸ್‌ವೈ
ಹುಬ್ಬಳ್ಳಿ-ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಅಥಣಿಯಲ್ಲಿ ಲಕ್ಷ್ಮಣ ಸವದಿಯವರನ್ನು ಸೋಲಿಸುವ ಜವಾಬ್ದಾರಿ ಕ್ಷೇತ್ರದ ಜನ ತೆಗೆದುಕೊಳ್ಳಿ ಎಂದು ಅಥಣಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಲಕ್ಷ್ಮಣ ಸವದಿ ವಿರುದ್ಧ ಮಹೇಶ್ ಕುಮಟಳ್ಳಿ ಸವಾಲು
ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ವಿರುದ್ಧ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ತೀವ್ರ ವಾಗ್ದಾಳಿ ನಡೆಸಿದರು. "ಲಕ್ಷ್ಮಣ ಸವದಿ ಉಪಕಾರ ನಮ್ಮ ಮೇಲಿಲ್ಲ ಎಂದು ನಾವು ಘಂಟಾಘೋಷವಾಗಿ ಹೇಳುತ್ತೇವೆ. ನಮ್ಮಿಂದ ನೀವು ಎಂಎಲ್‌ಸಿ ಆಗಿದಿರು, ರಾಜ್ಯದ ಡಿಸಿಎಂ ಆಗಿದ್ದೀರಿ," ಎಂದು ಮಹೇಶ್ ಕುಮಟಳ್ಳಿ ತಿಳಿಸಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications