'ಮೊದಲೇ ಹೇಳಿದ್ದೇನೆ, ಯತ್ನಾಳ್ ಹೇಳಿಕೆಯಲ್ಲಿ ಏನೂ ಧಮ್ ಇಲ್ಲ': ಅರುಣ್ ಸಿಂಗ್
ಬೆಳಗಾವಿ, ಏಪ್ರಿಲ್ 9: ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಳಗಾವಿಗೆ ಆಗಮಿಸಿದ್ದಾರೆ.
ಉಪ ಚುನಾವಣೆ ತಯಾರಿಯಾಗಿ ಇಂದು ಹಲವು ಸಭೆ ನಡೆಸಲಿದ್ದೇನೆ, ಬೆಳಗಾವಿ ಲೋಕಸಭೆ, ಎರಡು ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲ್ತೇವೆ ಎಂದು ಅರುಣ್ ಸಿಂಗ್ ಹೇಳಿದರು.
ಇನ್ನು ಪಂಚರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ರಚನೆ ನಿಶ್ಚಿತವಾಗಿದ್ದು, ಪಶ್ಚಿಮ ಬಂಗಾಳದಲ್ಲಿ 200ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ನೇತೃತ್ವದ ಸರ್ಕಾರ ರಚಿಸುತ್ತೇವೆ. ತಮಿಳುನಾಡು, ಪಾಂಡಿಚೇರಿಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕೇರಳದಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಮತದಾನ ಬಳಿಕ ರಾಜಕೀಯ ಬದಲಾವಣೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಮತದಾನ ಬಳಿಕ ಮೂರೂ ಸ್ಥಾನ ಗೆದ್ದು, ಬಿಜೆಪಿ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.
ರಾಜ್ಯ ಸರ್ಕಾರ ಮತ್ತಷ್ಟು ಗಟ್ಟಿಯಾಗಿ ಉತ್ಸಾಹದಿಂದ ಕಾರ್ಯಕರ್ತರು ಕೆಲಸ ಮಾಡ್ತಾರೆ, ಯತ್ನಾಳ್ ಹೇಳಿಕೆ ಬಗ್ಗೆ ಬಹಳ ಮೊದಲೇ ಹೇಳಿದ್ದೇನೆ, ಅವರ ಹೇಳಿಕೆಯಲ್ಲಿ ಏನೂ ಧಮ್ ಇಲ್ಲ ಎಂದು ಹೇಳುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವ್ಯಂಗ್ಯವಾಡಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೈಕಮಾಂಡ್ ಏಕೆ ಕ್ರಮ ಕೈಗೊಂಡಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ, ಯತ್ನಾಳ್ ವಿರುದ್ಧ ಕ್ರಮ ಕೈಗೊಂಡಿದ್ದೇವೆ, ಮತ್ತೆಷ್ಟು ಕ್ರಮ ಕೈಗೊಳ್ಳೋದು? ಎಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅರುಣ್ ಸಿಂಗ್ ಹೇಳಿದರು.












Click it and Unblock the Notifications