Hukkeri Constituency: ಕತ್ತಿ 'ಕುಟುಂಬ' ರಾಜಕಾರಣಕ್ಕೆ ಹೊಡೆತ ನೀಡಲು ಕಾಂಗ್ರೆಸ್ ಸನ್ನದ್ಧ- ಇಲ್ಲಿದೆ ಇನ್‌ಸೈಡ್ ಸ್ಟೋರಿ
ಲಿಂಗಾಯತರೇ ಅಧಿಕವಾಗಿರುವ ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ವರದಿ, ವಿಶ್ಲೇಷಣೆ ಓದಿ
ಬೆಳಗಾವಿ, ಮಾರ್ಚ್ 14: ಕರ್ನಾಟಕದ ಪ್ರತಿಷ್ಠಿತ ವಿಧಾನಸಭೆ ಕ್ಷೇತ್ರಗಳಲ್ಲಿ ಹುಕ್ಕೇರಿಯು ಒಂದು. ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಹುಕ್ಕೇರಿ ತಾಲ್ಲೂಕು ಬೆಳಗಾವಿ ಜಿಲ್ಲೆಯಲ್ಲಿ ಬರುತ್ತದೆ. ಲಿಂಗಾಯತರೇ ಅಧಿಕವಾಗಿರುವ ಕ್ಷೇತ್ರದ ಇತಿಹಾಸದಲ್ಲಿ ಕತ್ತಿ ಮನೆತನದ ಪಾರುಪತ್ಯವಿದೆ. 1983 ರಿಂದಲೂ ಈ ಕ್ಷೇತ್ರದಲ್ಲಿ ಕತ್ತಿ ಕುಟುಂಬದ ಸದಸ್ಯರೇ ಆಯ್ಕೆಯಾಗುತ್ತಾ ಬಂದಿದ್ದಾರೆ.

1985ರ ವರೆಗೆ ಕಾಂಗ್ರೆಸ್ ಪಾರುಪತ್ಯ
1952ರಲ್ಲಿ ಈ ಕ್ಷೇತ್ರಕ್ಕೆ ಮೊದಲ ಬಾರಿಗೆ ಚುನಾವಣೆ ನಡೆಯಿತು. ಆಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದಾರೆ. ಅಲ್ಲಿಂದ 1985ರ ವರೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತ ಬಂದರು. 1985 ರ ಚುನಾವಣೆಯಲ್ಲಿ ವಿಶ್ವನಾಥ್ ಕತ್ತಿ ಆಯ್ಕೆಯಾದರು. ಅವರು ಜನತಾ ಪಕ್ಷದಿಂದ ಗೆಲುವು ಸಾಧಿಸಿದರು. ಅವರ ನಿಧನದ ನಂತರ ಪುತ್ರ ಉಮೇಶ್ ಕತ್ತಿ ಹುಕ್ಕೇರಿ ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದರು.

ಸತತ ಮೂರು ಬಾರಿ ಉಮೇಶ್ ಕತ್ತಿ ಆಯ್ಕೆ
1989, 1994 ಹಾಗೂ 1999 ರಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಉಮೇಶ್ ಕತ್ತಿ ಸತತ ಮೂರು ಬಾರಿ ಜನತಾ ಪರಿವಾರದಿಂದ ಆಯ್ಕೆಯಾದರು. ಅವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆ ನಂತರ, 2004 ರಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಯ್ಕೆಯಾದರು. ಶಶಿಕಾಂತ್ ನಾಯಕ್ ಅವರು ಬಿಜೆಪಿಯಿಂದ ಗೆಲುವು ಸಾಧಿಸಿದರು.

2008ರಲ್ಲಿ ಉಮೇಶ್ ಕತ್ತಿ ಬಿಜೆಪಿ ಸೇರ್ಪಡೆ
2008ರಲ್ಲಿ ಉಮೇಶ್ ಕತ್ತಿ ಅವರು ಜನತಾ ದಳದಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಆ ವರ್ಷ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಆ ನಂತರ ನಡೆದ 2013 ಹಾಗೂ 2018ರ ವಿಧಾನಸಭೆ ಚುನಾವಣೆಗಳಲ್ಲಿ ಉಮೇಶ್ ಕತ್ತಿ ಪುನರಾಯ್ಕೆಗೊಂಡರು. ಅವರು ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದರು. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಕತ್ತಿ ಅವರು ಅಕಾಲಿಕ ಮರಣ ಹೊಂದಿದರು.

ರಮೇಶ್ ಕತ್ತಿಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತ
ಉಮೇಶ್ ಕತ್ತಿ ಅವರು ನಿಧನವಾದ ನಂತರ ಅವರ ಕಿರಿಯ ಸಹೋದರ ರಮೇಶ್ ಕತ್ತಿಯವರಿಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗಿದೆ. ರಮೇಶ್ ಕತ್ತಿ ಅವರು ಒಂದು ಬಾರಿ ಸಂಸದರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ರಮೇಶ್ ಕತ್ತಿ ಅವರ ಹಿಡಿತವೂ ಸಾಕಷ್ಟಿದೆ. ಅವರು ಗೆಲ್ಲುವ ಅಭ್ಯರ್ಥಿಯೆಂದೇ ಭಾವಿಸಲಾಗಿದೆ. ಸಹೋದರನ ಸಾವಿನ ಅನುಕಂಪವು ಕ್ಷೇತ್ರದಲ್ಲಿ ಕೆಲಸ ಮಾಡಲಿದೆ ಎಂದು ನಂಬಲಾಗಿದೆ.

ಹುಕ್ಕೇರಿಯಲ್ಲಿ ಹೊಂದಾಣಿಕೆ ರಾಜಕಾರಣ
ಹುಕ್ಕೇರಿಯಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಾ ಬಂದಿದೆ ಎಂಬ ಮಾತುಗಳು ಈ ಹಿಂದಿನಿಂದಿಲೂ ಕೇಳಿಬಂದಿವೆ. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷವು ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಮಾಜಿ ಸಚಿವ ಎ ಬಿ ಪಾಟೀಲ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸುವ ಬಗ್ಗೆ ನಾಯಕರು ಚಿಂತನೆ ನಡೆಸಿದ್ದಾರೆ. ಜಾತಿವಾರು ನೋಡುವುದಾದರೆ, ಎ ಬಿ ಪಾಟೀಲ್ ಲಿಂಗಾಯತ ಸಮುದಾಯಕ್ಕೆ ಸೇರಿದವರು. ರಮೇಶ್ ಕತ್ತಿಯವರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈ ಹಿನ್ನೆಲೆಯಲ್ಲಿ, ಇಬ್ಬರು ನಾಯಕರು ಪೈಪೋಟಿಗಿಳಿದರೆ, ಹುಕ್ಕೇರಿ ಕ್ಷೇತ್ರದಲ್ಲಿ ಭಾರೀ ಹಣಾಹಣಿ ಏರ್ಪಡಲಿದೆ ಎಂದು ರಾಜಕೀಯ ತಜ್ಞರು ತಿಳಿಸಿದ್ದಾರೆ.

ಹುಕ್ಕೇರಿ ಕ್ಷೇತ್ರದ ಅಂಕಿಅಂಶ
ಹುಕ್ಕೇರಿ ಕ್ಷೇತ್ರದಲ್ಲಿರುವ ಒಟ್ಟು ಜನಸಂಖ್ಯೆ 3,99,270. ಇಲ್ಲಿ 2,00,490 ಪುರುಷರು ಮತ್ತು 1,98,780 ಮಹಿಳೆಯರು ಇದ್ದಾರೆ. ಒಟ್ಟು 1,92,032 ಮತದಾರರಿದ್ದಾರೆ. ಅದರಲ್ಲಿ 95,923 ಪುರುಷರು ಮತ್ತು 94,978 ಮಹಿಳೆಯರು. ಶೇ 85.87 ಹಿಂದೂಗಳು, ಶೇ 10.4 ಮುಸ್ಲಿಮರು ಮತ್ತು ಶೇ 0.1ರಷ್ಟು ಕ್ರಿಶ್ಚಿಯನ್ನರು ಇದ್ದಾರೆ ಈ ಕ್ಷೇತ್ರದಲ್ಲಿದ್ದಾರೆ.

2018 ಚುನಾವಣೆ ಫಲಿತಾಂಶ
ಬಿಜೆಪಿಯ ಉಮೇಶ್ ಕತ್ತಿಗೆ ದೊರೆತ ಮತಗಳು - 83588
ಕಾಂಗ್ರೆಸ್‌ನ ಎ ಬಿ ಪಾಟೀಲ್‌ಗೆ ಸಿಕ್ಕ ಮತಗಳು - 68203












Click it and Unblock the Notifications