Vande Bharat Express: ಹುಬ್ಬಳ್ಳಿ-ಪುಣೆ ರೈಲಿಗೆ ಜ.2 ರಿಂದ ಮತ್ತೊಂದು ನಿಲುಗಡೆ
ಬೆಳಗಾವಿ, ಡಿಸೆಂಬರ್ 30: ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಪುಣೆ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕವಿದೆ. ಹುಬ್ಬಳ್ಳಿ-ಬೆಳಗಾವಿ-ಪುಣೆ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ರೈಲು ಸಂಚಾರವನ್ನು ನಡೆಸುತ್ತಿದೆ. ಜನವರಿ 2 ರಿಂದ ಆರಂಭವಾಗುವಂತೆ ಈ ರೈಲಿಗೆ ಬೆಳಗಾವಿಯಲ್ಲಿ ಮತ್ತೊಂದು ನಿಲುಗಡೆ ನೀಡಲಾಗುತ್ತದೆ. ಈಗಾಗಲೇ ಹೊಸ ನಿಲುಗಡೆ ನೀಡಲು ರೈಲ್ವೆ ಇಲಾಖೆ ಸಹ ಒಪ್ಪಿಗೆ ನೀಡಿದೆ.
ಹುಬ್ಬಳ್ಳಿ-ಬೆಳಗಾವಿ-ಪುಣೆ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಬೆಳಗಾವಿಯ ಘಟಪ್ರಭಾ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗುತ್ತದೆ. ಈಗಾಗಲೇ ಬೆಳಗಾವಿಯಲ್ಲಿ ರೈಲು ನಿಲುಗಡೆಗೊಳ್ಳುತ್ತಿದ್ದು, ಈಗ ಬೆಳಗಾವಿಯಲ್ಲಿಯೇ ಮತ್ತೊಂದು ನಿಲುಗಡೆ ಈ ರೈಲಿಗೆ ಸಿಗಲಿದೆ.

ಈ ಕುರಿತು ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಈರಣ್ಣ ಕಡಾಡಿ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಜನವರಿ 2 ರಿಂದ ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಈ ರೈಲು ಸೇವೆಯ ಉಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
2 ನಿಮಿಷ ನಿಲುಗಡೆ: ರೈಲು ಪುಣೆಯಿಂದ ಮಧ್ಯಾಹ್ನ 2.15ಕ್ಕೆ ಹೊರಟು ರಾತ್ರಿ 7.38ಕ್ಕೆ ಘಟಪ್ರಭಾ ನಿಲ್ದಾಣಕ್ಕೆ ಬರಲಿದೆ. ಜನವರಿ 2ರಂದು ಸಂಜೆ 7 ಗಂಟೆಗೆ ರೈಲು ನಿಲ್ದಾಣದಲ್ಲಿ ರೈಲಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನವರಿ 3ರಂದು ಹುಬ್ಬಳ್ಳಿಯಿಂದ ಬೆಳಗ್ಗೆ 5.15ಕ್ಕೆ ಹೊರಡುವ ರೈಲು 7.23ಕ್ಕೆ ಘಟಪ್ರಭಾ ನಿಲ್ದಾಣಕ್ಕೆ ಆಗಮಿಸಲಿದೆ. ಉಭಯ ಮಾರ್ಗದಲ್ಲಿ ರೈಲಿಗೆ 2 ನಿಮಿಷ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಈರಣ್ಣ ಕಡಾಡಿ ಅವರು ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಘಟಪ್ರಭಾದಲ್ಲಿ ನಿಲುಗಡೆ ನೀಡಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಮನವಿ ಮಾಡಿದ್ದರು. ಈ ಮನವಿಗೆ ಸಚಿವರು ಸ್ಪಂದಿಸಿದ್ದು, ಜನವರಿ 2ರಿಂದಲೇ ರೈಲು ಘಟಪ್ರಭಾದಲ್ಲಿ 2 ನಿಮಿಷ ನಿಲುಗಡೆಗೊಳ್ಳಲಿದೆ.
ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಪುಣೆ ನಡುವೆ ಸಂಪರ್ಕ ಕಲ್ಪಿಸುವ ಈ ವಂದೇ ಭಾರತ್ ರೈಲಿಗೆ 2024ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಲಾಗಿದೆ. ಸದ್ಯದ ವೇಳಾಪಟ್ಟಿಯಂತೆ ಹುಬ್ಬಳ್ಳಿ-ಪುಣೆ (ರೈಲು ನಂಬರ್ 20669) ವಾರದಲ್ಲಿ 3 ಬಾರಿ (ಬುಧವಾರ, ಶುಕ್ರವಾರ ಹಾಗೂ ರವಿವಾರ) ಮತ್ತು ಪುಣೆ-ಹುಬ್ಬಳ್ಳಿ (ರೈಲು ನಂಬರ್ 20670) ಮೂರು ಬಾರಿ (ಗುರುವಾರ, ಶನಿವಾರ ಮತ್ತು ಸೋಮವಾರ) ಸಂಚಾರವನ್ನು ನಡೆಸುತ್ತಿದೆ.
ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಇದೆ. ಆದ್ದರಿಂದ ಈ ರೈಲು ಪ್ರತಿದಿನ ಓಡುವಂತೆ ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಆದರೆ ಪ್ರತಿದಿನದ ರೈಲು ಸಂಚಾರಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
ಪುಣೆ-ಹುಬ್ಬಳ್ಳಿ ವಂದೇ ಭಾರತ್ ರೈಲು ಸದ್ಯಕ್ಕೆ 5 ನಿಲ್ದಾಣಗಳನ್ನು ಒಳಗೊಂಡಿದೆ. ಈ ರೈಲು 557 ಕಿ. ಮೀ.ಯನ್ನು 8.5 ಗಂಟೆಗಳಲ್ಲಿ ತಲುಪುತ್ತದೆ. ಇತರ ರೈಲುಗಳಿಗೆ ಹೋಲಿಕೆ ಮಾಡಿದರೆ ಈ ರೈಲು ಸುಮಾರು 3 ತಾಸು ಪ್ರಯಾಣದ ಅವಧಿಯನ್ನು ಉಳಿಸುತ್ತದೆ. ರೈಲು 52 ಎಕ್ಸಿಕ್ಯುಟಿವ್, 478 ಚೇರ್ ಕಾರ್ ಸೇರಿ 530 ಸೀಟುಗಳನ್ನು ಹೊಂದಿದೆ.
ಸದ್ಯ ಇರುವ ರೈಲು ನಿಲುಗಡೆ
* ಸತಾರಾ 3 ನಿಮಿಷ
* ಸಾಂಗ್ಲಿ 2 ನಿಮಿಷ
* ಮೀರಜ್ ಜಂಕ್ಷನ್ 5 ನಿಮಿಷ
* ಬೆಳಗಾವಿ 5 ನಿಮಿಷ
* ಧಾರವಾಡ 2 ನಿಮಿಷ
ಜನವರಿ 2 ರಿಂದ ರೈಲು ಘಟಪ್ರಭಾದಲ್ಲಿ ನಿಲುಗಡೆಗೊಳ್ಳಲಿದೆ. ಘಟಪ್ರಭಾ ಬೆಳಗಾವಿ ಮತ್ತು ಮಿರಜ್ ನಡುವಿನ ಪ್ರಮುಖ ಮತ್ತು ಅತಿದೊಡ್ಡ ರೈಲು ನಿಲ್ದಾಣ. ಕೇಂದ್ರ ಸರ್ಕಾರದ ಅಮೃತ್ ಭಾರತ್ ಯೋಜನೆಯಡಿ ಈ ನಿಲ್ದಾಣವೂ ಆಯ್ಕೆಯಾಗಿದೆ. ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.












Click it and Unblock the Notifications