Heavy Rain: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಾರ್ಕಂಡೇಯ ನದಿ
ಬೆಳಗಾವಿ, ಜುಲೈ, 22: ಬೆಳಗಾವಿ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಧಾರಾಕಾರ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆ ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಮಾರ್ಕೆಂಡೆಯ ನದಿ ನೀರಿನ ಹರಿವು ಹೆಚ್ಚಳ ಹಿನ್ನೆಲೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಅಂಬೇವಾಡಿಯ ರೈತ ಕುಟುಂಬಗಳು ವಾಸವಾಗಿದ್ದ ಮನೆಗಳನ್ನು ನದಿ ನೀರು ಸುತ್ತುವರೆದಿದ್ದು, ಇಲ್ಲಿನ ಜನರು ಜೀವವನ್ನು ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ಮಳೆಗಾಲ ಸಮಯದಲ್ಲೂ ಈ ಭಾಗದ ರೈತ ಕುಟುಂಬಗಳಿಗೆ ಒಂದಲ್ಲ ಒಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇನ್ನು ಇದೀಗ ನದಿ ನೀರು ಮನೆಯೊಳಗೆ ನುಗ್ಗುವ ಭೀತಿ ಎದುರಾದ ಹಿನ್ನೆಲೆ ರೈತರು ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಮೆನೆಯಿಂದ ಬೇರೆಡೆಗೆ ಸ್ಥಳಾಂತರಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಈಗಾಗಲೇ ಈ ಭಾಗದ ಸಾವಿರಾರು ಹೆಕ್ಟೇರ್ ಜಮೀನು ಕೂಡ ಮಾರ್ಕಂಡೇಯ ನದಿ ನೀರಿನಲ್ಲಿ ಮುಳುಗಡೆಯಾಗಿದ್ದು, ಪರಿಣಾಮ ಭತ್ತ, ಕಬ್ಬು, ಮೆಣಸಿನಕಾಯಿ, ಮೆಕ್ಕೆಜೋಳ, ತರಕಾರಿ ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಇನ್ನು ಬೆಳೆಗಳನ್ನು ಕಳೆದುಕೊಂಡ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಭಾರೀ ಮಳೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದು, ಪರಿಣಾಮ ನದಿ, ಹಳ್ಳ-ಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಇನ್ನು ಮಲೆನಾಡಿನಲ್ಲಿಯೂ ಭಾರೀ ಮಳೆ ಆಗುತ್ತಿದ್ದು, ಭದ್ರಾ, ತುಂಗಾ ನದಿ ತುಂಬಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಭದ್ರಾ ಜಲಾಶಯಕ್ಕೆ ಸುಮಾರು 50,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ತುಂಗಾ ಜಲಾಶಯದಿಂದ ಬರೋಬ್ಬರಿ 70,000 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಹಾಗೆಯೇ ದಾವಣಗೆರೆ ಜಿಲ್ಲೆಯ ಹಲವೆಡೆ ಭಾರೀ ಮಳೆಯಿಂದ ಪ್ರವಾಹದ ವಾತಾವತಣ ನಿರ್ಮಾಣವಾಗಿದೆ.
ಆದರೆ, ತುಂಗಾ ನದಿ ತುಂಬಿ ಹರಿಯುತ್ತಿದೆ. ಮತ್ತೊಂದೆಡೆ ಕಳೆದ ನಾಲ್ಕೈದು ದಿನಗಳಿಂದ ಭದ್ರಾ ಜಲಾಶಯಕ್ಕೆ ವ್ಯಾಪಕವಾಗಿ ಒಳಹರಿವು ಬರುತ್ತಿರುವುದರಿಂದ ದಾವಣಗೆರೆ ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ. ಭದ್ರಾ ಜಲಾಶಯಕ್ಕೆ ಕೇವಲ ನಾಲ್ಕು ದಿನಗಳಲ್ಲಿ 12 ಅಡಿಗೂ ಹೆಚ್ಚು ನೀರು ಬಂದಿದ್ದು, ಈ ಬಾರಿ ಭದ್ರಾ ಜಲಾಶಯ ಭರ್ತಿಯಾಗುವ ವಿಶ್ವಾಸ ಇದೆ.
ಇನ್ನೂ ಮುಂಬರುವ ದಿನಗಳಲ್ಲಿ ಮಳೆ ಮತ್ತಷ್ಟು ಚುರುಕು ಪಡೆಯುವ ಸಾಧ್ಯತೆಯಿದ್ದು, ಇದೇ ರೀತಿ ಮಳೆ ಮುಂದುವರಿದರೆ ಆಗಸ್ಟ್‌ನಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಇದರಿಂದಾಗಿ ಭದ್ರಾ ಡ್ಯಾಂ ಜಲಾಶಯ ಭರ್ತಿಯಾಗುವ ವಿಶ್ವಾಸ ರೈತರಲ್ಲಿದೆ.
ತುಂಗಾ ಭದ್ರಾ ನದಿ ಹರಿಯುವ ಮಾರ್ಗವಾದ ನ್ಯಾಮತಿ, ಹೊನ್ನಾಳಿ, ಹರಿಹರದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಕೆಲವು ಗ್ರಾಮಗಳಲ್ಲಿನ ಸಾವಿರಾರು ಹೆಕ್ಟೇರ್ ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲದೆ, ಹೊನ್ನಾಳಿ, ಹರಿಹರ, ಚನ್ನಗಿರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರವಾಹದ ಭೀತಿ ಕ್ಷಣ ಕಳೆದಂತೆ ಹೆಚ್ಚಾಗುತ್ತಿದ್ದು, ಇಲ್ಲಿನ ಜನರು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿದ್ದು, ತುಂಗಭದ್ರಾ ನದಿಯಲ್ಲಿನ ನೀರಿನ ಹರಿವು ಹೆಚ್ಚಳವಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ನದಿಪಾತ್ರದಲ್ಲಿನ ಜನ, ಜಾನುವಾರುಗಳ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.
ತುಂಗಾ ಜಲಾಶಯದಿಂದ ಸುಮಾರು 70,000 ಕ್ಯೂಸೆಕ್ಸ್‌ಗಿಂತಲೂ ಅಧಿಕ ನೀರು ಬಿಡಲಾಗುತ್ತಿದ್ದು, ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇರುವುದರಿಂದ ಹೊನ್ನಾಳಿಯ ಬಾಲರಾಜ್ ಘಾಟ್ ಬಳಿ ಸಮಸ್ಯೆಯಾಗಲಿದೆ. ಇಲ್ಲಿನ ಜನರಿಗೆ ತಾತ್ಕಾಲಿಕವಾಗಿ ಕಾಳಜಿ ಕೇಂದ್ರ ತೆರೆಯಲು ಹಾಗೂ ಹರಿಹರದ ಗಂಗಾ ನಗರದ ಬಳಿ ನೀರಿನ ಪ್ರಮಾಣ ಹೆಚ್ಚಳದಿಂದ ಜನರಿಗೆ ತೊಂದರೆಯಾಗಲಿದೆ. ಇಲ್ಲಿನ ಜನರಿಗೆ ತಾತ್ಕಾಲಿಕವಾಗಿ ಎಪಿಎಂಸಿ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಹೊನ್ನಾಳಿಯಲ್ಲಿ ವಿಪತ್ತು ನಿರ್ವಹಣೆ ಪರಿಶೀಲನೆಗಾಗಿ ಜುಲೈ 23ರಂದು ಸಭೆ ಕರೆಯಲಾಗಿದೆ. ನದಿಯಲ್ಲಿ ನೀರಿನ ಹರಿವು ಏರಿಕೆ ಆಗುವುದರಿಂದ ವಿಪತ್ತು ನಿರ್ವಹಣಾ ತಂಡವನ್ನು ಸನ್ನದ್ದವಾಗಿಡಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ನದಿ ಪಾತ್ರದಲ್ಲಿ ಓಡಾಟ ಮಾಡಬಾರದು ಮತ್ತು ಜಾನುವಾರುಗಳನ್ನು ನದಿಗೆ ಇಳಿಸದಂತೆ ನೋಡಿಕೊಳ್ಳಲು ಸೂಚಿಸಿ ಎಚ್ಚರಿಕೆಯಿಂದಿರಲು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ಹರಿಹರ ತಾಲೂಕಿನ ಮಲೇಬೆನ್ನೂರು ಸಮೀಪದಲ್ಲಿ ಬರುವ ಪ್ರಸಿದ್ದ ಪವಾಡ ಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪ್ರವಾಹ ತಲೆದೋರಿದೆ. ಸ್ನಾನಘಟ್ಟ ಮುಳುಗಿದ್ದರೆ, ಹಲವು ಅಂಗಡಿಗಳು ನೀರಿನಲ್ಲಿ ಮುಳುಗಿವೆ. ಇದರಿಂದಾಗಿ ದೇವಸ್ಥಾನಕ್ಕೆ ಬರುವುದು ಬೇಡ ಎಂದು ಆಡಳಿತ ಮಂಡಳಿಯು ಸೂಚನೆ ಕೊಟ್ಟಿದೆ.












Click it and Unblock the Notifications