ಎಟಿಎಂ ಭದ್ರತೆಗೆ ಬರುತ್ತೆ ಮಾರ್ಗಸೂಚಿ

ಬೆಳಗಾವಿಯಲ್ಲಿನ ಎರಡನೇ ದಿನದ ಅಧಿವೇಶನದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಎಟಿಎಂನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿದರು. ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ನೇಮಕ, ಸಿಸಿಟಿವಿ ಅಳವಡಿಕೆ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.(ಎಟಿಎಂ ಭದ್ರತೆ : ಮುಖ್ಯಮಂತ್ರಿಗೆ 7 ಐಡಿಯಾ)
ಸುರೇಶ್ ಕುಮಾರ್ ಮಾತಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮತ್ತು ಸಿಸಿಟಿವಿ ಅಳವಡಿಕೆಗೆ ಸಂಬಂಧಿಸಿದಂತೆ ಪೊಲೀಸರೊಂದಿಗೆ ಚರ್ಚಿಸಿ, ಮಾರ್ಗಸೂಚಿ ರಚಿಸಲಾಗಿದೆ. (ನಿಯಮ ಪಾಲಿಸದ 1037 ಎಟಿಎಂಗೆ ಬೀಗ)
ಮಾರ್ಗಸೂಚಿ ಪಾಲಿಸಲು ಬ್ಯಾಂಕ್ ಗಳಿಗೆ ಮೂರುದಿನಗಳ ಕಾಲವಕಾಶ ನೀಡಿದ್ದೆವು. ಸದ್ಯ ಪೊಲೀಸರ ಸೂಚನೆ ಪಾಲಿಸದ ಬೆಂಗಳೂರಿನ 1,037 ಎಟಿಎಂಗಳನ್ನು ಮುಚ್ಚಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು. ಎಟಿಎಂ, ಜ್ಯುವೆಲ್ಲರಿ ಅಂಗಡಿ, ಫೈನಾನ್ಸ್ ಮುಂತಾದ ಸಂಸ್ಥೆಗಳಿಗೆ ರಕ್ಷಣೆ ಒದಗಿಸಲು ಮಾರ್ಗಸೂಚಿ ರಚಿಸಲು ಸಮಿತಿ ನೇಮಿಸಲಾಗಿದೆ.
ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿಯ ವರದಿ ಬಂದ ನಂತರ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಜಾರ್ಜ್ ಹೇಳಿದರು. ಎಟಿಎಂಗಳಲ್ಲಿ ಭದ್ರತೆ ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. (ಎರಡನೇ ದಿನದ ಅಧಿವೇಶನದ ಸ್ವಾರಸ್ಯಗಳು)
ಸಮಯಾವಕಾಶ ಕೇಳಿದ ಬ್ಯಾಂಕ್ : ಎಟಿಎಂಗಳಲ್ಲಿ ಸಿಸಿಟಿವಿ ಮತ್ತು ಅಲರಾಂ ಅಳವಡಿಸಲು ಸಮಯಾವಕಾಶ ನೀಡುವಂತೆ ಕೋರಿ ಬ್ಯಾಂಕ್ ಅಧಿಕಾರಿಗಳು ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಮಂಗಳವಾರ ಆಯುಕ್ತರನ್ನು ಭೇಟಿ ಮಾಡಿದ ಬ್ಯಾಂಕ್ ಅಧಿಕಾರಿಗಳು ಎಟಿಎಂಗಳು ಮುಚ್ಚಿದ್ದರಿಂದ ಜನರಿಗೆ ತೊಂದರೆ ಆಗುತ್ತಿದೆ. ಎಟಿಎಂಗಳಿಗೆ ಭದ್ರತಾ ಸಿಬ್ಬಂದಿಯನ್ನು ತಕ್ಷಣ ನೇಮಿಸುತ್ತೇವೆ. ಆದರೆ, ಅಲರಾಂ ಮತ್ತು ಸಿಸಿಟಿವಿ ಆಳವಡಿಸಲು ಟೆಂಡರ್ ಕರೆಯಬೇಕಾಗಿದೆ. ಆದ್ದರಿಂದ 10 ದಿನಗಳ ಸಮಯಾವಕಾಶ ನೀಡಬೇಕು ಎಂದು ಮಾಡಿದರು.












Click it and Unblock the Notifications