ಮೇ 29 ರಿಂದ ಸರ್ಕಾರಿ ಶಾಲೆಗಳು ಆರಂಭ: ಪ್ರತಿ 4ನೇ ಶನಿವಾರ ಪಾಲಕರ ಸಭೆ
ಬೆಳಗಾವಿ, ಮೇ 26: ಕರ್ನಾಟಕದಲ್ಲಿ ಶಾಲಾ ಮಕ್ಕಳ ಬೇಸಿಗೆ ರಜೆ ಮುಗಿಯುತ್ತಾ ಬಂದಿದೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮೇ 29ರಂದು ಪ್ರಾರಂಭವಾಲಿವೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿ 4ನೇ ಶನಿವಾರ ಪೋಷಕರ ಸಭೆಯನ್ನು ನಡೆಸಲು ಸಹ ತೀರ್ಮಾನಿಸಲಾಗಿದೆ.
ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ 'ನಮ್ಮ ಶಾಲೆ-ನಮ್ಮ ಜವಾಬ್ದಾರಿ' ಶಾಲಾ ಪ್ರಾರಂಭೋತ್ಸವ ಹಾಗೂ 2025-26ನೇ ಸಾಲಿನ ಶೈಕ್ಷಣಿಕ ಗುಣಮಟ್ಟದ ಪ್ರಗತಿಗಾಗಿ ಶಿಕ್ಷಣ ಇಲಾಖೆಯ ಮೇಲುಸ್ತುವಾರಿ ಅಧಿಕಾರಿಗಳ ಒಂದು ದಿನದ ಕಾರ್ಯಾಗಾರವನ್ನು ನಡೆಸಿದರು.

"ಸರ್ಕಾರದಿಂದ ಸರಬರಾಜು ಮಾಡಲಾಗಿರುವ ಶಾಲಾ ಸಮವಸ್ತ್ರ, ಪಠ್ಯಪುಸ್ತಕಗಳನ್ನು ಮೇ 29ರಂದು ನಡೆಯಲಿರುವ ಶಾಲಾ ಪ್ರಾರಂಭೋತ್ಸವದ ದಿನ ವಿತರಣೆ ಮಾಡಬೇಕು. ಪ್ರತಿ 4ನೇ ಶನಿವಾರ ಕಡ್ಡಾಯವಾಗಿ ಪಾಲಕರ ಸಭೆಯನ್ನು ನಡೆಸಿ ಅವರ ಸಹಕಾರದಿಂದ ಮಕ್ಕಳ ದಾಖಲಾತಿ, ಹಾಜರಾತಿಯನ್ನು ಕಲಿಕೆಗೆ ಸಮನ್ವಯ ಮಾಡಿಕೊಳ್ಳಬೇಕು" ಎಂದು ನಿರ್ದೇಶನ ನೀಡಿದರು.
"ಗುಣಾತ್ಮಕ ಶಿಕ್ಷಣಕ್ಕಾಗಿ 1 ರಿಂದ 10ನೇ ತರಗತಿಯವರೆಗೆ ನಿರ್ದಿಷ್ಟ ಮತ್ತು ವಿಶಿಷ್ಟ ಯೋಜನೆಯನ್ನು ರೂಪಿಸಬೇಕು. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಆರಂಭದಿಂದಲೇ ವಿಶೇಷ ಚಟುವಟಿಕೆ ರೂಪಿಸಿ 5 ಹಾಗೂ 8 ತರಗತಿಯ ಮಕ್ಕಳಿಗೆ ಗ್ರಾಮ ಪಂಚಾಯತಿ ಹಂತದಲ್ಲಿನ ಗ್ರಂಥಾಲಯಗಳ ಬಳಕೆ ಮೂಲಕ ಶಿಕ್ಷಣದ ಗುಣಮಟ್ಟ ತಿಳಿಯಲು ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು" ಎಂದು ಅಧಿಕಾರಿಗಳಿಗೆ ತಿಳಿಸಿದರು.
ಶಾಲಾ ಭೇಟಿ ಕಡ್ಡಾಯ: ಸಿಇಒ ರಾಹುಲ್ ಶಿಂಧೆ, "ನಾನು ಸಹ ಶಾಲೆಗಳಿಗೆ ತೆರಳಿ ಪಾಠ ಮಾಡುತ್ತೇನೆ. ಅದೇ ರೀತಿ ಎಲ್ಲ ಅಧಿಕಾರಿಗಳೂ ಶಾಲಾ ಭೇಟಿ ಕಡ್ಡಾಯವಾಗಿ ಮಾಡಬೇಕು. ಎಲ್ಲ ಅಧಿಕಾರಿಗಳು ದತ್ತು ಶಾಲೆಗೆ ತೆರಳಿ ಪಾಠ ಮಾಡಬೇಕು" ಎಂದು ಸೂಚನೆ ಕೊಟ್ಟರು.
"ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಯ, ವಿಷಯ ಪರಿವೀಕ್ಷಕರು, ಸಿ.ಆರ್.ಪಿ., ಬಿ.ಆರ್.ಪಿ., ಡಯಟ್ ಉಪನ್ಯಾಸಕರೂ ಸೇರಿದಂತೆ ಎಲ್ಲ ಅಧಿಕಾರಿಗಳು ಶಾಲಾ ಭೇಟಿಗಳ ಮೂಲಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಪ್ರಯತ್ನಿಸಬೇಕು" ಎಂದು ತಿಳಿಸಿದರು.
"ಕ್ರೀಡೆಗಳಿಗೆ ವಿಶೇಷ ಆದ್ಯತೆ ನೀಡಬೇಕು. ದೈಹಿಕ ಶಿಕ್ಷಕರು ಲಭ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಬಳಕೆ ಮಾಡುಕೊಂಡು ಮಕ್ಕಳಿಗೆ ಕಡ್ಡಾಯವಾಗಿ ತರಬೇತಿಯನ್ನು ನೀಡಬೇಕು. ಶಾಲೆಯಲ್ಲಿರುವ ಕಂಪ್ಯೂಟರ್, ಕ್ರೀಡಾ ಸಾಮಗ್ರಿ ಮತ್ತು ವಿಜ್ಞಾನ ಉಪಕರಣಗಳನ್ನು ಕಡ್ಡಾಯವಾಗಿ ಬಳಕೆ ಮಾಡಿಕೊಂಡು ಗುಣಾತ್ಮಕ ಶಿಕ್ಷಣ ನೀಡಬೇಕು" ಎಂದರು.
ಇಲಾಖೆಯ ಸೂಚನೆಗಳು ಮತ್ತು ಅವಶ್ಯಕತೆಯನ್ನು ಅರಿತುಕೊಂಡು ಪ್ರತಿ ಮಗುವಿಗರ ಮಧ್ಯಾಹ್ನ ಉಪಾಹಾರ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ನಲಿಕಲಿ, 4 ರಿಂದ 7 ರವರೆಗಿನ ವಿದ್ಯಾರ್ಥಿಗಳಿಗೆ ಹಾಗೂ 8, 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಕುರಿತು ಚರ್ಚೆ ನಡೆಯಿತು.
ಇದಲ್ಲದೇ ಮುಂಬರುವ ದಿನಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನ, ದಾಖಲಾತಿ, ಹಾಜರಾತಿ, ಮೂಲ ಸೌಕರ್ಯಗಳ ಒದಗಿಸುವಿಕೆ, ಇನ್ ಸ್ಪೈರ್ ಅವಾರ್ಡ್, ಕಂಪ್ಯೂಟರ್ ಶಿಕ್ಷಣದ ಪರಿಚಯಾತ್ಮಕ ವಿವರಣೆಯನ್ನು ನೀಡಲಾಯಿತು.












Click it and Unblock the Notifications