ಬೆಳಗಾವಿಯಲ್ಲಿ ಮೇ 12ರಿಂದ ನಿಷೇಧಾಜ್ಞೆ ಜಾರಿ
ಬೆಳಗಾವಿ, ಮೇ 04; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ 10ರಂದು ನಡೆಯಲಿದೆ. ಮತ ಎಣಿಕೆ ಮೇ 13ರಂದು ನಡೆಯಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಬೆಳಗಾವಿ ಸಹ ಒಂದು. ಮತ ಎಣಿಕೆ ದಿನ ಶಾಂತಿ ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಗುರುವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮತ ಎಣಿಕೆ ಕಾರ್ಯದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಿ. ಆರ್. ಪಿ. ಸಿ. 1973 ಕಲಂ 144ರ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿಗಳು ಆದೇಶದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ದಿನಾಂಕ 13/5/2023ರಂದು ಆಣಿ ದೇವಿ ಮಹಾವಿದ್ಯಾಲಯ ಬೆಳಗಾವಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ವಿಜಯೋತ್ಸವ ಆಚರಣೆಮಾಡುವುದು, ಬಣ್ಣ ಎರಚುವುದು ಹಾಗೂ ಮೇರವಣಿಗೆ ಮಾಡುವ ಸಾಧ್ಯತೆಯಿದ್ದು ಈ ಸಂದರ್ಭದಲ್ಲಿ ಇತರೆ ಅಭ್ಯರ್ಥಿಗಳು ಹಾಗೂ ಆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ತಂಟೆ ತಕರಾರು ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ; ಪ್ರಚೋದನೆಕಾರಿ ಘೋಷಣೆ ಮಾಡುವುದು, ಸಾರ್ವಜನಿಕ ಸಭೆ ಸಮಾರಂಭಗಳನ್ನು ಮಾಡಿ ವಿಜಯೋತ್ಸವ ಆಚರಣೆ ಮಾಡುವ ಸಂಭವ ಇರುವುದರಿಂದ ಹಾಗೂ ಕಾನೂನು & ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಿ. ಆರ್. ಪಿ. ಸಿ 1973ರ ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ಆದೇಶದಲ್ಲಿ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯಾದ ನಾನು ನಿತೇಶ್ ಕೆ. ಪಾಟೀಲ ಈ ಮೂಲಕ ಆದೇಶಿಸುವುದೇನೆಂದರೆ, ಬೆಳಗಾವಿ ಜಿಲ್ಲೆಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಮತ ಎಣಿಕೆ ಕಾರ್ಯದ ನಿಮಿತ್ತ ಬೆಳಗಾವಿ ಜಿಲ್ಲೆಯಾದ್ಯಂತ ದಿನಾಂಕ 12/5/2023ರ ಸಂಜೆ 5ಗಂಟೆಯಿಂದ ದಿನಾಂಕ 14/5/2023ರ ಬೆಳಗ್ಗೆ 7ಗಂಟೆಯವರೆಗೆ ಸಿ. ಆರ್. ಪಿ. ಸಿ 1973ರ ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಷರತ್ತುಗಳನ್ನು ವಿಧಿಸಿ ನಿಷೇಧಾಜ್ಞೆಯನ್ನು ಜಾರಿ ಮಾಡಿ ಆದೇಶಿಸಿರುತ್ತೇನೆ ಎಂದು ಹೇಳಿದ್ದಾರೆ.
ಷರತ್ತುಗಳು
* ಬೆಳಗಾವಿ ಜಿಲ್ಲೆಯಾದ್ಯಂತ 5ಕ್ಕಿಂತ ಹೆಚ್ಚು ಜನರು ಸೇರುವುದು, ಮೆರವಣಿಗೆ ಅಥವಾ ಸಾರ್ವಜನಿಕ/ ರಾಜಕೀಯ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ.
* ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
* ಕಲ್ಲುಗಳನ್ನು, ಖಾರಪಧಾರ್ಥ ಇಲ್ಲವೇ ಸ್ಫೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
* ಕಲ್ಲುಗಳನ್ನು ಮತ್ತು ಎಸೆಯುವಂಥಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
* ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳನ್ನು ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ.
* ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
* ಯಾವುದೇ ವ್ಯಕ್ತಿ ಸಾರ್ವಜನಿಕರಾಗಲಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂತಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.
* ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಯಾವತ್ತೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸುವುದು.
ಸದರಿ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications