ಕರ್ನಾಟಕ-ಮಹಾರಾಷ್ಟ್ರ ಗಡಿ ಪರಿಸ್ಥಿತಿ ಬಗ್ಗೆ ಪುಸ್ತಕ ಹೊರತನ್ನಿ
ಬೆಳಗಾವಿ, ಜನವರಿ 29: ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಪದೇಪದೇ ಕ್ಯಾತೆ ತೆಗೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರ ವಾಸ್ತವಿಕ ಪರಿಸ್ಥಿತಿ ದೇಶಕ್ಕೆ ತಿಳಿಸಲು ಪುಸ್ತಕ ಹೊರತರಲು ಬೆಳಗಾವಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.
ಕನ್ನಡಪರ ಹೋರಾಟಗಾರ, ಹಿರಿಯ ಪತ್ರಕರ್ತ ಮೆಹಬೂಬ್ ಮಕಾನದಾರ್ ಶುಕ್ರವಾರ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಏಕಾಂಗಿಯಾಗಿ ಅವರು ಡಿಸಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ಅಶೋಕ್ ಚಂದರಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಪುಸ್ತಕ ಪ್ರಕಟಿಸುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಹಿರಿಯ ಕನ್ನಡಪರ ಹೋರಾಟಗಾರರಾಗಿರುವ ಅಶೋಕ್ ಚಂದರಗಿ 1982ರ ಗೋಕಾಕ್ ಚಳವಳಿಯಿಂದ ಈವರೆಗೆ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಅಶೋಕ್ ಚಂದರಗಿ ಅವರು ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದಾರೆ. ಗಡಿ, ನಾಡು ನುಡಿ ಹಾಗೂ ಹೋರಾಟಗಳ ಬಗ್ಗೆ ಪ್ರಬಂಧ ಮಂಡಿಸಿರುವ ಅಶೋಕ್ ಚಂದರಗಿ ಪುಸ್ತಕ ಬರೆಯಲು ಅರ್ಹರು ಎಂದುದ ತಿಳಿಸಲಾಗಿದೆ. ಪುಸ್ತಕ ರಚಿಸಿ, ಪ್ರಕಟಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಕೆ ಮಾಡಲಾಗಿದೆ.
ಈಗಾಗಲೇ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಪುಸ್ತಕ ಬಿಡುಗಡೆ ಮಾಡಿದೆ. ಐವತ್ತು ವರ್ಷಗಳ ಹಿಂದೆ ಮಾಡಿದ ಸಾಕ್ಷ್ಯಚಿತ್ರವನ್ನು ಪುನಃ ಬಿಡುಗಡೆ ಮಾಡಿದೆ.
ಕಳೆದ ಭಾನುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ, "ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ" ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಕರ್ನಾಟಕದಲ್ಲಿ ಬಾರೀ ವಿರೋಧ ವ್ಯಕ್ತವಾಗಿತ್ತು.












Click it and Unblock the Notifications