ಚಿಕ್ಕೋಡಿಯಿಂದ ಮೊದಲ ಭಾರಿಗೆ ಸಂಸತ್‌ಗೆ ಪ್ರಿಯಾಂಕಾ ಜಾರಕಿಹೊಳಿ, ಬಿಜೆಪಿ ಜೊಲ್ಲೆಗೆ ಮುಖಭಂಗ
ಚಿಕ್ಕೋಡಿ, ಜೂನ್ 04: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಗೆಲುವು ಸಿಕ್ಕಿದೆ. ಈ ಮೂಲಕ ಕಳೆದ ಎರಡು ಬಾರಿ ಗೆದ್ದು ಬೀಗಿದ್ದ ಬಿಜೆಪಿಗೆ ಕಾಂಗ್ರೆಸ್ ಶಾಕ್ ನೀಡಿದೆ. ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.
ಚಿಕ್ಕೋಡಿಯಲ್ಲಿ ಪ್ರಭಾವಿ ರಾಜಕೀಯ ಕುಟುಂಬಗಳಾದ ಜಾರಕಿಹೊಳಿ ಕುಟುಂಬದ ಕುಡಿ ಈ ಬಾರಿ ಲೋಕಸಭಾ ಚುನಾವಣಾ ಕಣಕ್ಕಿಳಿದಿತ್ತು. ಬಿಜೆಪಿಯ ಹಾಲಿ ಸಂಸದ ಅಣ್ಣಸಾಹೇಬ್ ಜೊಲ್ಲೆ ವಿರುದ್ಧ ಕಾಂಗ್ರೆಸ್‌ನ ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರು ಗೆಲುವಿನ ನಗೆ ಬೀರಿದ್ದಾರೆ.

ಬಿಜೆಪಿ ಭದ್ರಕೋಟೆ ಎನ್ನಲಾಗಿದ್ದ ಚಿಕ್ಕೋಡಿ ಛಿದ್ರವಾಗಿ ಕಾಂಗ್ರೆಸ್ 'ಕೈ' ವಶವಾಗಿದೆ. ಇಲ್ಲಿ ಪ್ರಿಯಾಂಕಾ ಜಾರಕಿಹೊಳಿಯವರು ಬರೋಬ್ಬರಿ 4.63 ಲಕ್ಷಕ್ಕೂ ಅಧಿಕ ಮತಗಳಿಂದ (ಮಧ್ಯಾಹ್ನ 2.30ವರೆಗಿನಗ ಎಣಿಕೆ ಪ್ರಕಾರ) ವಿಜಯ ಸಾಧಿಸಿದ್ದಾರೆ. ಇತ್ತ ಬಿಜೆಪಿಯ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು 3.81 ಲಕ್ಷ ಮತಗಳನ್ನು ಪಡೆದು ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಮರುಕಳಿಸಿತು 2014ರ ಚುನಾವಣಾ ಫಲಿತಾಂಶ
2014ರಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಗೆಲುವು ಸಾಧಿಸಿದ್ದರು. ಅಂದು ಬಿಜೆಪಿಗೆ ಸೋಲಾಗಿತ್ತು. ಬಳಿಕ 2019ರಲ್ಲಿ ಇದೇ ಪ್ರಕಾಶ್ ಹುಕ್ಕೇರಿ ವಿರುದ್ಧ ರಮೇಶ್ ಕತ್ತಿಗೆ ಬದಲಾಗಿ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಗೆದ್ದಿತ್ತು. ಇದೀಗ ಮತ್ತೆ ಉಲ್ಟಾ ಆಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಈ ಬಾರಿಯೂ ರಮೇಶ್ ಕತ್ತಿಯವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ತಪ್ಪಿಸುವಲ್ಲಿ ಈ ಅಣ್ಣಾಸಾಹೇಬ್ ಜೊಲ್ಲೆಯವರು ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿ ಟಿಕೆಟ್ ಗಾಗಿ ಕ್ಷೇತ್ರದಲ್ಲಿ ತೀವ್ರ ಲಾಭಿ ನಡೆಸಿದ್ದರು ಎಂದು ವರದಿ ಆಗಿತ್ತು. ಕೊನೆಗೂ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಪ್ರಭಾವ ಹೆಚ್ಚಿದೆ ಎಂಬುದು ಸಾಬೀತಾಗಿದೆ. ಗೆಲವಿನ ಕುರಿತು ಚುನಾವಣೆ ಆಯೋಗ ಅಧಿಕೃತ ಮಾಹಿತಿ ನೀಡಲಿದೆ.












Click it and Unblock the Notifications