Chikkodi Lok Sabha Election 2024 Results: ಚಿಕ್ಕೋಡಿಯಲ್ಲಿ ಯಾರ ಪಾಲಾಗಲಿದೆ ಗೆಲುವಿನ ಪಟ್ಟ?
ಚಿಕ್ಕೋಡಿ, ಮೇ 27: ಬೆಳಗಾವಿ ಜಿಲ್ಲೆ ತಾಲೂಕು ಕೇಂದ್ರವಾಗಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಭಾರಿ ಎರಡು ಪ್ರಮುಖ ಪಕ್ಷಗಳು ತೀವ್ರ ಪೈಪೋಟಿ ಒಡ್ಡಿದವು. ಮೇ 7ರಂದು ಚುನಾವಣೆ ನಡೆದಿದ್ದು, ಬರೋಬ್ಬರಿ ಈ ಕ್ಷೇತ್ರವೊಂದರಲ್ಲೇ ಶೇಕಡಾ 78.66 ರಷ್ಟು ಮತದಾನ ಆಗಿದೆ. ಹಾಗಾದರೆ ಈ ಬಾರಿ ಗೆಲುವು ಯಾರಿಗೆ? ಕಾಂಗ್ರೆಸ್-ಬಿಜೆಪಿಗೆ ಇರುವ ಪೂರಕ ಅಂಶಗಳ ಏನು?.
ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಕಾಂಗ್ರೆಸ್‌ನಿಂದ ಕರ್ನಾಟಕದ ಹಾಲಿ ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಕಣಕ್ಕಿಳಿದಿದ್ದರು.

ಬಿಜೆಪಿಗೆ ಚಿಕ್ಕೋಡಿ ಗೆಲುವಿನ ಲೋಕಸಭಾ ಕ್ಷೇತ್ರವಾದರೂ ಸಹಿತ ಈ ಭಾರಿ ಪಕ್ಷವು ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದೆ. ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿದೆ. ಅಂದಮೇಲೆ ಕಾಂಗ್ರೆಸ್‌ಗೆ ಲೋಕಸಭಾ ಅಭ್ಯರ್ಥಿಗಳಿಗೆ ಹೆಚ್ಚಿನ ಬೆಂಬಲ ಸಿಕ್ಕಂತಾಯಿತು.
ಟಿಕೆಟ್ ಪಡೆಯಲು ಲಾಭಿ: ಒಮ್ಮತ ತೀರ್ಮಾನ
ಅಲ್ಲದೇ ಪ್ರತಿ ಭಾರಿ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರೀ ಲಾಭಿ ನಡೆಯುತ್ತದೆ. ಇದು ಸ್ಥಳಿಯ ಕಾರ್ಯಕರ್ತರ ಮೇಲೆ ಪ್ರಭಾವ ಬೀರುತ್ತದೆ. ಎರಡು ಭಾರಿ ಗೆಲುವು ಸಾಧಿಸಿದ್ದ ರಮೇಶ್ ಕತ್ತಿ ಅವರು ಈ ಸಲದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಟಿಕೆಟ್ ಪಡೆದ ಅಣ್ಣಾ ಸಾಹೇಬ್ ಜೊಲ್ಲೆ ಕಣಕ್ಕಿಳಿದರು. ಹೀಗಾಗಿ ಪ್ರಮುಖ ನಾಯಕರೊಬ್ಬರ ಸಕಾರಾತ್ಮಕ ಬೆಂಬಲ ಪಡೆಯುವಲ್ಲಿ ಬಿಜೆಪಿ ಅಭ್ಯರ್ಥಿ ಜೊಲ್ಲೆಗೆ ಸಾಧ್ಯವಾಗಲಿಲ್ಲ.

ಈ ಭಾಗದಲ್ಲಿ ಪ್ರಭಾವಿಗಳಾಗಿರುವ ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಪುತ್ರಿ ಕಣಕ್ಕಿಳಿದಿದ್ದರು. ಅವರನ್ನು ಕಾಂಗ್ರೆಸ್ ಮುಖಂಡರು ಒಮ್ಮತದಿಂದ ಚುನಾವಣೆಗೆ ಆಯ್ಕೆ ಮಾಡಿದ್ದರು. ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು, ಮೊದಲ ಚುನಾವಣೆಯಲ್ಲೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಕೈ' ಅಭ್ಯರ್ಥಿಗೆ ಅನುಭವದ ಕೊರತೆ
ಹಾಲಿ ಸಚಿವರು, ಸರ್ಕಾರದ ಮುಖ್ಯಸ್ಥರು ಕೂಡಿಕೊಂಡು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ಬಿಜೆಪಿ ತಂತ್ರಗಳಿಗೆ ಪ್ರತಿ ತಂತ್ರ ಹೆಣೆದಿದ್ದರು. ಆದರೆ ಅಭ್ಯರ್ಥಿಗೆ ರಾಜಕೀಯ ಅನುಭವದ ಕೊರತೆಯನ್ನು ಇಲ್ಲಿ ಗಮನಿಸಬಹುದು. ಬಿಜೆಪಿಯಲ್ಲಿ ಹಾಗಿಲ್ಲ, ಅಣ್ಣಾ ಸಾಹೇಬ್ ಜೊಲ್ಲೆ ಅವರು 2019ರಲ್ಲಿ ಬಹುಮತ ಪಡೆದು ಗೆದ್ದವರು. ಅನುಭವ ಇದೆ. ಪಕ್ಷ ಅಧಿಕಾರಕ್ಕೆ ತರಲು ನಿಟ್ಟಿನಲ್ಲಿ ಕ್ಷೇತ್ರದ ತುಂಬೆಲ್ಲ ಓಡಾಡಿದ್ದರು.
ಚಿಕ್ಕೋಡಿಯಲ್ಲಿ ಹೆಚ್ಚಾದ ಕುತೂಹಲ
ಭರ್ಜರಿ ಪ್ರಚಾರ, ತಂತ್ರಗಾರಿಕೆ, ಪಕ್ಷಗಳ ಪ್ರಮುಖ ನಾಯಕರ ಬೆಂಬಲ ಇವುಗಳು ಆಯಾ ಅಭ್ಯರ್ಥಿಗಳಿಗೆ ಒಂದಷ್ಟು ಮತಗಳನ್ನು ತಂದು ಕೊಡಬಹುದು. ಜಾತಿ ವಿಚಾರವಾಗಿ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳು ಬರಬಹುದು ಎನ್ನಲಾಗಿದೆ. ಏನಿದ್ದರು ಕೊನೆಗೆ ಮತದಾರರ ತೀರ್ಮಾನವೇ ಅಂತಿಮವಾಗಿದೆ. ಒಂದು ಆಯಾಮದಲ್ಲಿ ನೋಡಿದರೆ ಈ ಬಾರಿ ಚಿಕ್ಕೋಡಿಯ ಸ್ಪರ್ಧೆ, ಪೈಪೋಟಿ ಸಮಬಲದಿಂದ ಕೂಡಿದೆ ಅಂತಲೂ ಹೇಳಲಾಗುತ್ತಿದೆ. ಜೂನ್ 4ರಂದು ಫಲಿತಾಂಶದ ದಿನವೇ ಗೆಲುವಿನ ಗುಟ್ಟು ರಟ್ಟಾಗಲಿದೆ.
ಹಿಂದಿನ ಚುನಾವಣೆಗಳ ಗೆಲುವು-ಸೋಲಿನ ಮಾಹಿತಿ
2014ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ 4.74ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದರು. ಈ ವೇಳೆ ಬಿಜೆಪಿಯ ರಮೇಶ್ ಕತ್ತಿ ಕಡಿಮೆ ಅಂತರದಿಂದ ಸೋತಿದ್ದರು.
ನಂತರ 2019ರಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಸೋಲಿಸಿ ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ ಅವರು 7.45ಲಕ್ಷ ಬಹುಮತ ಗಳಿಸಿ ವಿಜಯಸಾಧಿಸಿದ್ದರು. ನಂತರ ಈ ಬಾರಿಯು ಅಣ್ಣಾಸಾಹೇಬ್ ಜೊಲ್ಲೆ ಅವರೇ ಕಣ್ಣಕಿಳಿದಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ.












Click it and Unblock the Notifications