ಬೆಳಗಾವಿ ಜಿಲ್ಲೆಗೆ ಕೇಂದ್ರದ ಬಂಪರ್ ಕೊಡುಗೆ
ಬೆಳಗಾವಿ, ನ. 16 : ಬೆಳಗಾವಿ ಜನರ ಬಹುದಿನದ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಬೆಳಗಾವಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಅಸ್ತು ಎಂದಿರುವ ಕೇಂದ್ರ ಅದಕ್ಕಾಗಿ 293 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರ ಅನುಮತಿ ನೀಡಿರುವ ಪತ್ರ ಬೆಳಗಾವಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಲುಪಿದ್ದು, ರನ್ ವೇ ವಿಸ್ತರಣೆ, ಟ್ಯಾಕ್ಸಿ ಸೇವೆ ಅಭಿವೃದ್ಧಿ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಕರೆಯುವಂತೆ ಸೂಚನೆ ನೀಡಿದೆ. ಅನುಮತಿ ಪತ್ರ ತಲುಪಿದ ಬಳಿಕ ವಿಮಾನ ನಿಲ್ದಾಣದ ಅಗತ್ಯ ಕಾಮಗಾರಿಗೆ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ.

ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿ ಬೆಳಗಾವಿಯಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಹೆಚ್ಚಿನ ವಿಮಾನ ಸೌಲಭ್ಯ ಕಲ್ಪಿಸಬೇಕು ಎಂದು ಇಲ್ಲಿನ ಉದ್ಯಮಿಗಳ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ವಿಮಾನ ನಿಲ್ದಾಣದ ಮೇಲ್ದರ್ಜಗೆ ಏರಿದ ನಂತರ ಬೆಳಗಾವಿಯಿಂದ ವಿಮಾನ ಸಂಚಾರ ಹೆಚ್ಚಾಗುವ ಸಾದ್ಯತೆ ಇದೆ.
ಸದ್ಯ ಸ್ಪೈಸ್ ಜೆಟ್ ವಿಮಾನ ಬೆಂಗಳೂರಿನಿಂದ ಬೆಳಗಾವಿಗೆ ದಿನಕ್ಕೊಂದು ಬಾರಿ ಆಗಮಿಸುತ್ತದೆ. ವಿಮಾನ ನಿಲ್ದಾಣ ಅಭಿವೃದ್ದಿ ಕಾರ್ಯ ಪೂರ್ಣಗೊಂಡರೆ, ಬೆಳಗಾವಿಯಿಂದ ಗೋವಾ, ಮುಂಬೈಗಳಿಗೆ ವಿಮಾನ ಸಂಪರ್ಕ ಆರಂಭವಾಗುವ ಸಾಧ್ಯತೆ ಇದೆ.
ಬೆಳಗಾವಿ ರಾಜಕೀಯ ನಾಯಕರಾದ ಸುರೇಶ್ ಅಂಗಡಿ, ರಮೇಶ್ ಕತ್ತಿ, ಪ್ರಭಾಕರ ಕೋರೆ ಕೆಲವು ದಿನಗಳ ಹಿಂದೆ ವಿಮಾನ ಯಾನ ಸಚಿವ ಅಜಿತ್ ಸಿಂಗ್ ಅವರನ್ನು ಭೇಟಿ ಮಾಡಿ ವಿಮಾನ ನಿಲ್ದಾಣದ ಮೇಲ್ದರ್ಜೆಗೆ ಏರಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು.
ಬೆಳಗಾವಿಯಲ್ಲಿ ಇತ್ತೀಚಿನ ದಿನಗಳಲ್ಲಿ ಉದ್ದಿಮೆಗಳು ಹೆಚ್ಚಾಗಿ ಸ್ಥಾಪನೆಯಾಗುತ್ತಿದ್ದು, ವಿಮಾನ ನಿಲ್ದಾಣ ವಿಸ್ತರಣೆಯಾದರೆ, ಹೆಚ್ಚಿನ ಅನುಕೂಲವಾಗಲಿದೆ ಎಂದು ವಿವರಿಸಿದ್ದರು. ಬೆಳಗಾವಿ ವಿಮಾನ ನಿಲ್ದಾಣ ವಿಸ್ತರಣೆ ಆದರೆ, ಹುಬ್ಬಳ್ಳಿ ಮೇಲಿನ ಅವಲಂಬನೆ ತಪ್ಪುತ್ತದೆ ಎಂದು ಮನವಿ ಮಾಡಿದ್ದರು.












Click it and Unblock the Notifications