ಕೀಳುಮಟ್ಟದ ದ್ವೇಷ ರಾಜಕೀಯಕ್ಕೆ ಧಿಕ್ಕಾರ- ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಕೆಂಡಾಮಂಡಲ
ಬೆಂಗಳೂರು, ಡಿಸೆಂಬರ್ 20: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಮೇಲೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸರ ಈ ನಡೆ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿಯ ಚನ್ನಮ್ಮ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರ ಬಂಧನ ಖಂಡಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, 'ಸುವರ್ಣಸೌಧದೊಳಗೆ ನುಗ್ಗಿ ಕೆಲವು ಕಾಂಗ್ರೆಸ್ ಪುಡಾರಿಗಳು, ರೌಡಿಗಳು ದಾಂಧಲೆ ನಡೆಸಿದವರು ಹಾಗೂ ನಡುರಸ್ತೆಯಲ್ಲಿ ಹಲ್ಲೆ ಮಾಡಲು ಪ್ರಚೋದನೆ ನೀಡಿದವರನ್ನೂ ಸಹ ಬಂಧಿಸಬೇಕು' ಎಂದು ಆಗ್ರಹಿಸಿದರು.
ಅಲ್ಲದೇ ಸಭಾಪತಿಗಳ ಗಮನಕ್ಕೂ ತರದೆ ಏಕಾಏಕಿ ಸಿ.ಟಿ ರವಿ ಅವರನ್ನು ಬಂಧಿಸಿದ್ದು ಅಕ್ಷಮ್ಯ ಅಪರಾಧ. ಅವರು ಗಾಯವಾಗಿದ್ದರೂ ಆಸ್ಪತ್ರೆಗೆ ಕರೆದುಕೊಂಡು ಹೋಗದೇ ರಾತ್ರಿಯೆಲ್ಲಾ 400-500 ಕಿ.ಮೀ ಸುತ್ತಾಡಿಸಿ ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ ಎಂದು ಗದಗ, ರಾಮದುರ್ಗ ಸೇರಿ ಎಲ್ಲಾ ಪೊಲೀಸ್ ಸ್ಟೇಷನ್ ಸುತ್ತಾಡಿಸಿ ದ್ವೇಷ ಹಾಗೂ ಕೀಳುಮಟ್ಟದ ರಾಜಕೀಯ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಕೊಳ್ಳಿ ಇಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಕಾಂಗ್ರೆಸ್ ನಾಯಕರ ಗೂಂಡಾ ವರ್ತನೆ ಅಮಾನವೀಯ
ಸುವರ್ಣ ಸೌಧದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಗೂಂಡಾ ವರ್ತನೆ ಅಮಾನವೀಯವಾದುದು. ಮಾಜಿ ಸಚಿವರೂ ಆದ ವಿಧಾನಪರಿಷತ್ ಸದಸ್ಯ ಶ್ರೀ ಸಿ.ಟಿ.ರವಿ ಅವರನ್ನು ರಾಜ್ಯ ಸರ್ಕಾರದ ಕುಮಕ್ಕಿನಿಂದ ಪೊಲೀಸರು ಭಯೋತ್ಪಾದಕರಂತೆ ನಡೆಸಿಕೊಂಡಿದ್ದಾರೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ನಾಲ್ಕೈದು ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲಿ ಕೂರಿಸಿದ್ದಾರೆ, ವಿಪಕ್ಷ ನಾಯಕರು, ವಕೀಲರನ್ನೂ ಒಳಕ್ಕೆ ಬಿಟ್ಟಿಲ್ಲ. ಸಿ.ಟಿ.ರವಿ ಅವರ ದೂರನ್ನೂ ರಿಜಿಸ್ಟರ್ ಮಾಡಿಲ್ಲ, ನಮೆಲ್ಲ ಕಾರ್ಯಕರ್ತರು ರಾತ್ರಿ ಪೊಲೀಸ್ ಠಾಣೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಸಿ.ಟಿ.ರವಿ ಅವರಿಗೆ ತಲೆಗೆ ಪೆಟ್ಟು ಬಿದ್ದಿದ್ದರೂ ಆಸ್ಪತ್ರೆಗೂ ಕರೆದುಕೊಂಡು ಹೋಗಿಲ್ಲ, ಕಾಂಗ್ರೆಸ್ ಸರ್ಕಾರದ ಕುಮಕ್ಕಿನಿಂದ ನಡೆದಿರುವ ಈ ಘಟನೆ ಖಂಡನೀಯ ಎಂದಿದ್ದಾರೆ.












Click it and Unblock the Notifications