ಬಿಜೆಪಿ ನೀಡಿದ್ದ ಆಫರ್ ಬಗ್ಗೆ ಮತದಾರರ ಮುಂದೆ ಬಾಯಿಬಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್
Recommended Video
ಬೆಳಗಾವಿ, ನ 27: ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಭರಾಟೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಅಥಣಿಯ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ವಿರೋಧ ವಾಕ್ ಪ್ರಹಾರ ನಡೆಸಿದ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿ ನೀಡಿದ್ದ ಆಫರ್ ಬಗ್ಗೆ, ಬಹಿರಂಗ ಸಭೆಯಲ್ಲಿ ಪ್ರಸ್ತಾವಿಸಿದ್ದಾರೆ.
ಕ್ಷೇತ್ರದ ಸಂಕೋನಕೊಟ್ಟಿ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ಹೆಬ್ಬಾಳ್ಕರ್, "ಕ್ಷೇತ್ರದ ಮತದಾರರು ಈ ಚುನಾವಣೆ ಯಾಕಾಗಿ ಬಂದಿದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಲಬೇಕು" ಎಂದು ಹೇಳಿದ್ದಾರೆ.
"ಸಮ್ಮಿಶ್ರ ಸರಕಾರದ ಬಗ್ಗೆ ಮಾತನಾಡುವ ಕುಮಠಳ್ಳಿಗೆ ನಾಚಿಕೆಯಾಗಬೇಕು" ಎಂದು ಹೇಳಿರುವ ಲಕ್ಷ್ಮೀ ಹೆಬ್ಬಾಳ್ಕರ್, "ಕ್ಷೇತ್ರದ ಅಭಿವೃದ್ದಿಗೆ ಕುಮಠಳ್ಳಿ ರಾಜೀನಾಮೆ ನೀಡಲಿಲ್ಲ, ಅವನ ಅಭಿವೃದ್ದಿಗೆ ರಾಜೀನಾಮೆ ನೀಡಿದ" ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ನನ್ನನ್ನೂ ಬಿಜೆಪಿಗೆ ಸೇರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದ
ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಕರ್, "ಗೋಕಾಕ್ ಪಟ್ಟಣದ ದೊಡ್ಡವ (ರಮೇಶ್ ಜಾರಕಿಹೊಳಿ) ನನ್ನನ್ನೂ ಬಿಜೆಪಿಗೆ ಸೇರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದ. ಬಹಳ ಪ್ರಯತ್ನವನ್ನೂ ನಡೆಸಿದ್ದ" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಕಾಂಗ್ರೆಸ್ಸಿಗೆ ರಾಜೀನಾಮೆಯನ್ನು ನೀಡಿ, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
"ಒಂದು ದಿನ ಸಭೆಗೆ ನನ್ನನ್ನು ಕರೆದಿದ್ದರು. ಬಿಜೆಪಿಗೆ ಸೇರುವಂತೆ ಆಹ್ವಾನಿಸಿದ್ದರು. ಕಾಂಗ್ರೆಸ್ಸಿಗೆ ರಾಜೀನಾಮೆಯನ್ನು ನೀಡಿ, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ" ಎನ್ನುವ ಆಫರ್ ಅನ್ನು ನನಗೆ ಕೊಡಲಾಯಿತು. "ನಿಮ್ಮ ಸಹವಾಸವೇ ಬೇಡ ಎಂದು ಸಭೆಯಿಂದ ಹೊರಬಂದಿದ್ದೆ" ಎಂದು ಲಕ್ಷ್ಮೀ ಹೆಬ್ಬಾಳ್ಕರ್, ಆ ವೃತ್ತಾಂತವನ್ನು ಮೆಲುಕು ಹಾಕಿಕೊಂಡಿದ್ದಾರೆ.

ಮುಂಬೈನ ಐಷಾರಾಮಿ ಹೊಟೇಲ್ ನಲ್ಲಿ ಮಜಾ ಮಾಡುತ್ತಿದ್ದ
"ನೆರೆ ಪ್ರವಾಹದ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಕುಡಿಯೋಕೆ ನೀರು, ತಿನ್ನೋದಕ್ಕೆ ಕನಿಷ್ಠ ಗಂಜಿ ಕೂಡಾ ಇರಲಿಲ್ಲ. ಈ ಕುಮಠಳ್ಳಿ, ಆ ವೇಳೆ, ಮುಂಬೈನ ಐಷಾರಾಮಿ ಹೊಟೇಲ್ ನಲ್ಲಿ ಮಜಾ ಮಾಡುತ್ತಿದ್ದ. ನಾನು ಮತ್ತು ನನ್ನ ಕುಟುಂಬ, ಸಂತ್ರಸ್ತರ ಪರ ಕೆಲಸ ಮಾಡಿದ್ದೆವು" ಎಂದು ಲಕ್ಷ್ಮೀ ಹೆಬ್ಬಾಳ್ಕರ್, ಕುಮಠಳ್ಳಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಕರ್ನಾಟಕ ಪ್ರವಾಹ
"ನೆರೆ ಸಂಭವಿಸಿದಾಗ ನಿನ್ನ ತರಹ ನಾನು ಓಡಿ ಹೋಗಲಿಲ್ಲ, ಜವಾಬ್ದಾರಿಯಿಂದ ನುಣುಚಿಕೊಳ್ಳಲಿಲ್ಲ. ಕಾಂಗ್ರೆಸ್ ಬಿಟ್ಟು ಹೋಗಿದ್ದರು ಪರವಾಗಿರಲಿಲ್ಲ, ಆದರೆ ಜನರ ಕಷ್ಟಗಳೊಂದಗೆ ಇದ್ದಿದ್ದರೆ ಭಲೇ ಎನ್ನುತ್ತಿದ್ದೆ. ಅವರ ಕಷ್ಟಗಳಿಗೆ ಸ್ಪಂದಿಸಿದ್ದರೆ ನೀನು ಓಡಿ ಹೋಗಿದ್ದರೂ ಜನರು ನಿನ್ನನ್ನು ಕ್ಷಮಿಸುತ್ತಿದ್ದರು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮಂಗಳವಾರ (ನ 26) ವಾಗ್ದಾಳಿ ನಡೆಸಿದ್ದರು.

ಲಕ್ಷ್ಮಣ ಸವದಿ ಎನ್ನುವ ದೊಡ್ಡ ಶಕ್ತಿಯನ್ನು ಸೋಲಿಸಿದ್ದೆವು
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮಹೇಶ್ ಕುಮಠಳ್ಳಿ ಗೆಲ್ಲಲು ರಾಹುಲ್ ಗಾಂಧಿಯವರನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿದ್ದೆವು. ಲಕ್ಷ್ಮಣ ಸವದಿ ಎನ್ನುವ ದೊಡ್ಡ ಶಕ್ತಿಯನ್ನು ಸೋಲಿಸಿದ್ದೆವು. ಈಗ, ಕುಮಠಳ್ಳಿ ಪಕ್ಷಕ್ಕೆ ಮತ್ತು ಕ್ಷೇತ್ರದ ಮತದಾರರಿಗೆ ದ್ರೋಹ ಬಗೆದಿದ್ದಾನೆ" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಏಕವಚನದಲ್ಲಿ ಹರಿಹಾಯ್ದಿದ್ದಾರೆ.












Click it and Unblock the Notifications