ಬೆಳಗಾವಿಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ರೈಲು ದುರಂತ
ಬೆಳಗಾವಿ, ಅಕ್ಟೋಬರ್ 15: ಬೆಳಗಾವಿಯಲ್ಲಿ ರೈಲು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಶನಿವಾರ ಮಧ್ಯರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರೈಲ್ವೆ ಗಾರ್ಡ್ ಕುಡಿದು ಮಲಗಿದ್ದರಿಂದ ರೈಲು ಕ್ರಾಸಿಂಗ್ ಗೇಟ್ ಹಾಕಿರಲಿಲ್ಲ. ಇದನ್ನು ಕಂಡ ರೈಲ್ವೇ ಚಾಲಕ ರೈಲು ನಿಲ್ಲಿಸಿ ಕೆಳಗಿಳಿದು ಕ್ರಾಸ್ಸಿಂಗ್ ಗೇಟ್ ಹಾಕಿದ ಘಟನೆ ನಡೆದಿದೆ.

ಬೆಳಗಾವಿ ಗೇಟ್ ಸಂಖ್ಯೆ 2ರಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಮಲಗಿದ್ದ ರೈಲ್ವೆ ಗಾರ್ಡ್ ನಿಂದ ಭಾರಿ ಅನಾಹುತವೊಂದ ನಡೆಯುವುದರಲ್ಲಿತ್ತು. ಆದರೆ ರೈಲ್ವೆ ಚಾಲಕನ ಮುಂಜಾಗ್ರತಾ ಕ್ರಮದಿಂದ ಅನಾಹುತವೊಂದು ಅದೃಷ್ಟಾವಶಾತ್ ತಪ್ಪಿದೆ.
ಇದೀಗ ರೈಲ್ವೇ ಚಾಲಕ ಇಳಿದು ರೈಲ್ವೇ ಕ್ರಾಸಿಂಗ್ ಗೇಟ್ ಹಾಕಿ ತೆರಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೀದರ್ ನಲ್ಲಿ ಯುವಕ ನೀರು ಪಾಲು
ಧಾರಾಕಾರ ಮಳೆಗೆ ಬೀದರ್ ನಲ್ಲಿ ಯುವಕನೊಬ್ಬ ನೀರು ಪಾಲಾದ ಘಟನೆ ನಡೆದಿದೆ. ಹಳ್ಳ ದಾಟಲು ಹೋಗಿ ಹಂದಿಖೇರಾ ಗ್ರಾಮದ ಶಿವಾಜಿ ಚವ್ಹಾಣ ಎಂಬ 26ವಯಸ್ಸಿನ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹಕ್ಕ್ಯಾಳ ಗ್ರಾಮದ ಬಳಿ ಇರುವ ಹಳ್ಳದಲ್ಲಿ ನೀರಿನ ರಭಸಕ್ಕೆ ಯುವಕ ನೀರು ಪಾಲಾಗಿದ್ದಾನೆ. ರಾತ್ರಿ 8 ಗಂಟೆ ಸುಮಾರಿಗೆ ಕಮಲನಗರದಿಂದ ಮುರ್ಕಿಯತ್ತ ಹೋಗುವಾಗ ಜೀಪನಲ್ಲಿದ್ದ ಯುವಕ ಕೆಳಗೆ ಇಳಿದು ಜೀಪಿಗೆ ದಾರಿ ತೋರಿಸಲು ಮುಂದೆ ನಡೆದಿದ್ದ.
ಅದರೆ ಮಹಾರಾಷ್ಟ್ರದಿಂದ ಬರುವ ನೀರಿನ ರಭಸ ಹೆಚ್ಚಾಗಿ ಯುವಕ ಕೊಚ್ಚಿ ಹೋಗಿದ್ದಾನೆ. ಘಟನಾ ಸ್ಥಳದಲ್ಲಿ ಕಮಲನಗರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಯುವಕನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಬೀದರ್ ನಲ್ಲಿ ಕಂದಕಕ್ಕೆ ಉರುಳಿದ ಬಸ್
ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಖಂದಕಕ್ಕೆ ಬಿದ್ದು ಭಾರೀ ಅನಾಹುತವೊಂದು ನಡೆದಿದೆ. ಅಪಘಾತದಲ್ಲಿ ಔರಾದ ತಾಲೂಕಿನ ಮುರ್ಕಿ ಗ್ರಾಮದ ಮಮತಾ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 20ಕ್ಕೂ ಅಧಿಕ ಜನರು ಇದರಲ್ಲಿ ಗಂಭೀರ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಉದಗೀರ ತಾಲೂಕಿನ ಶೇಲ್ಹಾಳ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಔರಾದ ಬಸ್ ಡಿಪೋಗೆ ಸೇರಿದ ಬಸ್ ಔರಾದ್ ನಿಂದ ಉದಗೀರಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನು ಉದಗೀರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಾಯಗೊಂಡವರೆಲ್ಲಾ ಕರ್ನಾಟಕ ರಾಜ್ಯದವರಾಗಿದ್ದಾರೆ.
ಅಪಘಾತ ಸಂಬಂಧ ಉದಗೀರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications