ಬೆಳಗಾವಿ : ಎರಡನೇ ದಿನದ ಅಧಿವೇಶನದ ಸ್ವಾರಸ್ಯಗಳು
ಬೆಳಗಾವಿ, ನ.26 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಎರಡನೇ ದಿನದ ಕಲಾಪ ಆರಂಭವಾಗಿದೆ. ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಾದಿಭಾಗ್ಯ ಯೋಜನೆ ಎಲ್ಲಾ ವರ್ಗದ ಹೆಣ್ಣುಮಕ್ಕಳಿಗೂ ವಿಸ್ತರಿಸಬೇಕು ಮತ್ತು ಎಪಿಎಲ್ ಕಾರ್ಡ್‌ದಾರರಿಗೂ ಪಡಿತರ ವಿತರಿಸಬೇಕು ಎಂದು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಮುಂದುವರೆಸಿದ್ದು, ಅದರ ನಡುವೆಯೇ ಕಲಾಪ ಮುಂದುವರೆದಿದೆ.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಎರಡನೇ ದಿನದ ಕಲಾಪಗಳು ಆರಂಭವಾಯಿತು. ಸೋಮವಾರ ಬೆಳಗ್ಗೆಯಿಂದ ಸದನದಲ್ಲಿ ಧರಣಿ ನಡೆಸುತ್ತಿರುವ ಯಡಿಯೂರಪ್ಪ ಅವರ ಆರೋಗ್ಯ ತಪಾಸಣೆಯನ್ನು ಮಂಗಳವಾರ ಬೆಳಗ್ಗೆ ವೈದ್ಯರು ನಡೆಸಿದರು. ಅಹೋರಾತ್ರಿ ಧರಣಿಯನ್ನು ಹಿಂಪಡೆಯುವಂತೆ ಮಾಡಿದ ಮನವಿಯನ್ನು ಅವರು ನಿರಾಕರಿಸಿದ್ದು, ಧರಣಿ ಮುಂದುವರೆಸಿದ್ದಾರೆ. (ಮೊದಲ ದಿನದ ಕಲಾಪದ ಪ್ರಮುಖ ಅಂಶಗಳು)

ಕಲಾಪದ ಮುಖ್ಯಾಂಶಗಳು
* ಬಿಜೆಪಿ ಶಾಸಕ ಸುರೇಶ್ ಕುಮಾರ್ ಬೆಂಗಳೂರಿನ ಎಟಿಎಂನಲ್ಲಿ ಜ್ಯೋತಿ ಲಕ್ಷ್ಮೀ ಅವರ ಮೇಲೆ ನಡೆದ ಹಲ್ಲೆಯನ್ನು ಸದನದಲ್ಲಿ ಪ್ರಸ್ತಾಪಿಸಿ, ಎಟಿಎಂಗಳಲ್ಲಿ ಸದೃಢ ಭದ್ರತಾ ಸಿಬ್ಬಂದಿ ನೇಮಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಕೆ.ಜೆ.ಜಾರ್ಜ್ ಎಟಿಎಂಗ ಭದ್ರತೆ ಕುರಿತು ಸಭೆ ನಡೆಸಲಾಗಿದೆ. ಪೊಲೀಸರು ನಿಯಮ ಪಾಲಿಸದ ಎಟಿಎಂಗಳಿಗೆ ಬೀಗ ಹಾಕಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
* ಸದನದ ಬಾವಿಗಿಳಿದು ಅಹೋರಾತ್ರಿ ಧರಣಿ ನಡೆಸುತ್ತಿರುವ ಯಡಿಯೂರಪ್ಪ ಅವರಿಗೆ ಧರಣಿ ನಿಲ್ಲಿಸಿ ತಮ್ಮ ಸ್ಥಳಕ್ಕೆ ಮರಳುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಮನವಿ ಮಾಡಿದರು. ಆದರೆ, ಇದಕ್ಕೆ ಅವರು ನಿರಾಕರಿಸಿದರು. ಆಗ ಸ್ಪೀಕರ್ ಯಡಿಯೂರಪ್ಪ ಅವರೇ ಸ್ವಲ್ಪ ನಗ್ರೀ ಮುಖ ಗಂಟು ಹಾಕಿಕೊಳ್ಳಬೇಡಿ ಎಂದರು. ಸ್ಪೀಕರ್ ಮಾತು ಕೇಳಿ ಯಡಿಯೂರಪ್ಪ ನಕ್ಕರು. ಬಿಎಸ್ವೈ ನಕ್ಕರೆ ಸಮಸ್ಯೆ ಬಗೆಹರಿದಂತೆಯೇ ಎಂದು ವೈ.ಎಸ್.ವಿ.ದತ್ತಾ ಹೇಳಿದಾಗ ಸದನದಲ್ಲಿ ನಗುವಿನ ಅಲೆ ಎದ್ದಿತು.
* ಮುಂದಿನ ವರ್ಷದ ಮಾರ್ಚ್ ವೇಳೆಗೆ ರಾಜ್ಯದಲ್ಲಿ 6-7ಸಾವಿರ ಕಿ.ಮೀ.ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಕರ್ನಾಟಕದಲ್ಲಿ ಉತ್ತಮ ತಾಣಗಳಿವೆ ಆದರೆ, ಅಲ್ಲಿ ಚಿತ್ರೀಕರಣಕ್ಕೆ ತೆರಳಲು ಸರಿಯಾದ ರಸ್ತೆಗಳಿಲ್ಲ, ಆದ್ದರಿಂದ ವಿದೇಶಕ್ಕೆ ಚಿತ್ರೀಕರಣಕ್ಕೆ ಹೋಗುತ್ತೇವೆ ಎಂದು ತಾರಾ ಅನುರಾಧ ಸದನದ ಗಮನ ಸೆಳೆದರು. ರಸ್ತೆ ಸೌಕರ್ಯ ಕಲ್ಪಿಸುತ್ತೇವೆ ವಿದೇಶಕ್ಕೆ ಹೋಗಬೇಡಿ ಇಲ್ಲೇ ಶೂಟಿಂಗ್ ಮಾಡಿ ಎಂದು ಸಚಿವರು ಪ್ರತಿಕ್ರಿಯಿಸಿದರು.
* ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಇನ್ನು ಮುಂದೆ ಯಾವುದೇ ಯೋಜನೆಗಳಿಗೆ ಅಗತ್ಯವಿರುವಷ್ಟು ಭೂಮಿಯನ್ನು ಮಾತ್ರ ವಶಪಡಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಚ್.ಡಿ.ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹೆಚ್ಚುವರಿ ಭೂ ಸ್ವಾಧೀನಕ್ಕೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಎರಡನೇ ದಿನವೂ ಪ್ರತಿಭಟನೆ
* ಸುವರ್ಣ ವಿಧಾನಸೌಧದ ಹೊರಗೆ ಸುಮಾರು 2000 ರೈತರು ಕಬ್ಬಿಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರವೂ ಅದು ಮುಂದುವರೆದಿದೆ. ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಪ್ರತಿಭಟನಾ ನಿರತರೊಂದಿಗೆ ನಡೆಸಿದ ಮಾತುಕತೆ ಸಹ ವಿಫಲವಾಗಿದೆ.
* ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಂಗಳವಾರ ಬೆಳಗಾವಿ ಬಂದ್ ಗೆ ಕರೆ ನೀಡಿತ್ತು. ಆದರೆ, ಜನಜೀವನ ಎಂದಿನಂತೆ ಇದ್ದು, ಸಂಚಾರ ವ್ಯವಸ್ಥೆಯು ಸುಗಮವಾಗಿತ್ತು. ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಸಂಭಾಜಿ ಪಾಟೀಲ್ ಗೆ ಬೆಳಗಾವಿಯಲ್ಲೇ ತಕ್ಕ ಉತ್ತರ ನೀಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. (ಕರ್ನಾಟಕದ ಶವಯಾತ್ರೆ ಮಾಡುತ್ತೇನೆಂದ ಭಂಡ ಸಂಭಾಜಿ)
ಯಡಿಯೂರಪ್ಪ ಮೇಲೆ ಎಲ್ಲರ ಕಣ್ಣು
* ಯಡಿಯೂರಪ್ಪ ಧರಣಿ ನಡೆಯುತ್ತಿದ್ದರೂ ಕಲಾಪ ಮುಂದುವರೆಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಎರಡನೇ ದಿನದ ಕಲಾಪಕ್ಕೂ ಮೊದಲು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ಎಲ್ಲಾ ಸಚಿವರು ಸಹಕರಿಸಬೇಕು. ಪ್ರತಿಪಕ್ಷದವರು ವಾಗ್ದಾಳಿ ನಡೆಸಿದಾಗ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಶಾಸಕರು ಅಭಿಪ್ರಾಯಪಟ್ಟರು.
* ಸದನದ ಬಾವಿಯಲ್ಲಿ ಧರಣಿ ನಡೆಸುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವರು ಮತ್ತು ಸಿಎಂ ಮತ್ತೊಮ್ಮೆ ಧರಣಿ ಕೈ ಬಿಡುವಂತೆ ಮನವಿ ಮಾಡುವುದು. ಅದಕ್ಕೆ ಒಪ್ಪಿ ಅವರು ಧರಣಿ ನಿಲ್ಲಿಸಿದರೆ ಸರಿ, ಇಲ್ಲದಿದ್ದರೆ ಕಲಾಪ ಮುಂದುವರೆಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.












Click it and Unblock the Notifications