ಸೈಬರ್ ಕ್ರೈಂ ಹೀಗೂ ನಡೀತಿದೆ, ಹುಷಾರು!
ತಂತ್ರಜ್ಞಾನದ ಯುಗದಲ್ಲಿರುವ ನಾವು ಎಷ್ಟು ಜೋಪಾನವಾಗಿದ್ದರೂ ಸೈಬರ್ ವಂಚಕರಿಂದ ತಪ್ಪಿಸಿಕೊಳ್ಳುವುದು ದೊಡ್ಡ ಸವಾಲಾಗಿಬಿಟ್ಟಿದೆ. ಸೈಬರ್ ಕ್ರೈಂ ಎಂದು ದೊಡ್ಡ ಜಾಲವೇ ಎಲ್ಲೆಡೆ ವ್ಯಾಪಿಸಿದ್ದು, ವಂಚನೆಗೆ ತಂತ್ರಜ್ಞಾನವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಇದೆಲ್ಲದರ ಉದ್ದೇಶ ಹಣ ಮಾಡುವುದೊಂದೇ. ಅನಕ್ಷರಸ್ಥರು ಮಾತ್ರವಲ್ಲದೇ, ಶಿಕ್ಷಿತರು ಕೂಡ ಈ ಜಾಲದ ಸುಳಿಗೆ ಸಿಲುಕಿಕೊಳ್ಳುತ್ತಿರುವ ಘಟನೆಗಳು ಆಗಾಗ ಹೊರಬರುತ್ತಲೇ ಇವೆ.
ಬೆಳಗಾವಿಯಲ್ಲಿ ಕೂಡ ಹೊಸ ಸೈಬರ್ ಜಾಲವೊಂದು ಬೆಳಕಿಗೆ ಬಂದಿದೆ. ಗುಪ್ತಚರ ಇಲಾಖೆ ಹಾಗೂ ಕ್ರೈಂ ಬ್ರ್ಯಾಂಚ್ ಹೆಸರಲ್ಲಿ ಮಹಿಳೆಯರಿಗೆ ವಿಡಿಯೋ ಕಾಲ್ ಮಾಡುವ ವಂಚಕರು, ಅವರನ್ನು ಬೆತ್ತಲಾಗುವಂತೆ ಹೆದರಿಸುತ್ತಿದ್ದಾರೆ. ಬಳಿಕ ಮಹಿಳೆಯರ ನಗ್ನ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಕೂಡ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಇಂತಹ ಕೇಸ್‌ಗಳು ಬೆಳಗಾವಿಯ ಸೈಬರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಇದೇ ಮಾದರಿಯ ಮೂರು ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಜಾಲದ ಬೆನ್ನತ್ತಿದ್ದಾರೆ.
ಈ ಜಾಲ ಹೇಗಿದೆ?: ಸೈಬರ್ ವಂಚಕರಿಂದ ಮಹಿಳೆಯರಿಗೆ ಮೊದಲಿಗೆ ಮೇಲ್, ಮೆಸೇಜ್, ಫೋನ್ ಕಾಲ್ ಅಥವಾ ವಾಟ್ಸಾಪ್‌ನಲ್ಲಿ ಒಂದು ಸಂದೇಶ ಬರುತ್ತದೆ. ನಾವು ಕ್ರೈಮ್ ಬ್ರ್ಯಾಂಚ್ದಿಂದ ಕರೆ ಮಾಡಿದ್ದೇವೆ ಎಂದು ಪರಿಚಯ ಮಾಡಿಕೊಳ್ಳುತ್ತಾರೆ. ಕ್ರೈಂ ಕೇಸ್‌ನಲ್ಲಿ ನಿಮ್ಮ ಹೆಸರು ಬಂದಿದೆ ಎಂದು ಬೆದರಿಸುತ್ತಾರೆ. ನೀವು ನಮ್ಮ ಹತ್ತಿರ ಬಂದು ಈ ಕೇಸ್ ಬಗ್ಗೆ ವಿವರಣೆ ನೀಡಬೇಕು ಎಂದು ಪಟ್ಟು ಹಿಡಿಯುತ್ತಾರೆ.
ನಿಮ್ಮನ್ನು ವಿಚಾರಣೆ ಮಾಡುತ್ತೇವೆ, ಕ್ಯಾಮೆರಾ ಮುಂದೆ ಬಂದು ನಿಂತುಕೊಳ್ಳಿ ಎನ್ನುತ್ತಾರೆ. ಈ ಕೇಸ್ ಸಂಬಂಧ ನಿಮ್ಮ ದೇಹವನ್ನು ಪರಿಶೀಲನೆ ನಡೆಸಬೇಕು, ಬಟ್ಟೆ ಬಿಚ್ಚಿ ನಿಂತುಕೊಳ್ಳಿ ಎಂದು ಹೇಳುತ್ತಾರೆ. ಇದಕ್ಕೆ ಹೆದರುವ ಮಹಿಳೆಯರು ಕ್ಯಾಮೆರಾ ಮುಂದೆ ನಗ್ನಗೊಂಡು ನಿಲ್ಲುತ್ತಾರೆ. ಆಗ ಅದನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುತ್ತಾರೆ.

ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ಇಡೀ ನಿಮ್ಮ ಕುಟುಂಬವನ್ನೇ ಕೇಸ್‌ನಲ್ಲಿ ಸಿಲುಕಿಸುತ್ತೇವೆ ಎಂದು ಬೆದರಿಸುತ್ತಾರೆ. ಬಳಿಕ ಇದೇ ನಗ್ನ ವಿಡಿಯೋಗಳನ್ನು ಇಟ್ಟುಕೊಂಡು ಮಹಿಳೆಯರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟು, ಮಹಿಳೆಯರಿಂದ ಹಣ ದೋಚುತ್ತಿದ್ದಾರೆ ಎಂದು ಪೊಲೀಸರು ಕೃತ್ಯದ ಬಗ್ಗೆ ವಿವರಿಸಿದ್ದಾರೆ.
ಬೆಳಗಾವಿ ಭಾಗದಲ್ಲಿ ಇದೇ ರೀತಿಯ ಮೂರು ಪ್ರಕರಣಗಳು ಸೆನ್ ಠಾಣೆಯಲ್ಲಿ ದಾಖಲಾಗಿವೆ. ಸಾರ್ವಜನಿಕರಿಗೆ ಒಂದು ವೇಳೆ ಇದೇ ರೀತಿ ವಂಚಕರು ಕರೆ ಮಾಡಿ, ನಾವು ಗುಪ್ತಚರ ಇಲಾಖೆ ಎಂದೆಲ್ಲ ಹೇಳಿಕೊಂಡರೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದರ ಜೊತೆಗೆ ಸೈಬರ್ ವಂಚಕರು ಹಣ ಪೀಕಲೆಂದು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಏನೇನೋ ವಿಚಾರಗಳನ್ನು ಪ್ರಸ್ತಾಪಿಸಿ, ಜನರನ್ನು ವಂಚಿಸಿ ಹಣ ದೋಚುತ್ತಿದ್ದಾರೆ. ಇಂತಹ ಯಾವುದೇ ಕರೆಗಳು ಬಂದರೂ ಹೆದರದೆ, ಹತ್ತಿರದ ಪೊಲೀಸರನ್ನು ಸಂಪರ್ಕಿಸಿ.












Click it and Unblock the Notifications