Belagavi: ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದು ಪಾಗಲ್ ಪ್ರೇಮಿ ಆತ್ಮಹತ್ಯೆ
ಬೆಳಗಾವಿ ಮಾರ್ಚ್ 5: ಯುವತಿಯೊಬ್ಬಳು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಅವಳನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ಮಂಗಳವಾರ ನಡೆದಿದೆ. ಯುವತಿಯನ್ನು ಕೊಲೆ ಮಾಡಿದ ನಂತರ ಆರೋಪಿ ತಾನೂ ಕೂಡ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಾವಿಯ ಶಹಾಪುರದ ನವಿ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಐಶ್ವರ್ಯ ಮಹೇಶ ಲೋಹಾರ ಕೊಲೆಯಾದ ಪ್ರೇಯಸಿ. ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದ 29 ವರ್ಷದ ಪ್ರಶಾಂತ ಯಲ್ಲಪ್ಪ ಕುಂಡೇಕರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರೋಪಿ ಪ್ರಶಾಂತ್ ಐಶ್ವರ್ಯಳನ್ನು ಪ್ರೀತಿಸುತ್ತಿದ್ದನು. ಒಂದು ವರ್ಷಕ್ಕೂ ಹೆಚ್ಚು ಕಾಲ ಅವಳನ್ನು ಹಿಂಬಾಲಿಸುತ್ತಿದ್ದನು ಎಂದು ತನಿಖೆಯಿಂದ ತಿಳಿದು ಬಂದಿದೆ. ಮದುವೆಗೆ ನಿರಾಕರಿಸಿದ್ದಕ್ಕೆ ಕಳೆದ ದಿನ ಚಿಕ್ಕಮ್ಮನ ಮನೆಯಲ್ಲಿ ಪ್ರೇಯಸಿ ಐಶ್ವರ್ಯಳನ್ನು ಕೊಲೆ ಮಾಡಿ ಯುವಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ ಯಲ್ಲಪ್ಪ ಕುಂಡೇಕರ, ಈ ಹಿಂದೆ ಐಶ್ವರ್ಯ ತಾಯಿಯನ್ನು ಸಂಪರ್ಕಿಸಿ, ಆಕೆಯನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದ. ಆದರೆ ಐಶ್ವರ್ಯ ತಾಯಿ ಮೊದಲು ಆರ್ಥಿಕವಾಗಿ ಸ್ಥಿರವಾಗುವತ್ತ ಗಮನಹರಿಸುವಂತೆ ಸಲಹೆ ನೀಡಿದ್ದರು.
ಕಳೆದ ದಿನ ಮುಂಜಾನೆ ಪ್ರಶಾಂತ್ ವಿಷದ ಬಾಟಲಿಯೊಂದಿಗೆ ಐಶ್ವರ್ಯಳ ಚಿಕ್ಕಮ್ಮನ ಮನೆಗೆ ಬಂದಿದ್ದಾನೆ. ಜೊತೆಗೆ ಐಶ್ವರ್ಯಳನ್ನು ಮದುವೆಯಾಗುವಂತೆ ಮತ್ತೊಮ್ಮೆ ಒತ್ತಾಯಿಸಿದನು. ಆದರೆ ಆಕೆ ನಿರಾಕರಿಸಿದಾಗ ಆಕೆಗೆ ವಿಷ ಕುಡಿಸಲು ಒತ್ತಾಯಿಸಿದ್ದಾನೆ. ಅವಳು ವಿರೋಧಿಸುತ್ತಿದ್ದಂತೆ ಪ್ರಶಾಂತ್ ತನ್ನ ಜೇಬಿನಿಂದ ಚಾಕುವನ್ನು ಹೊರತೆಗೆದು ಅವಳ ಗಂಟಲು ಸೀಳಿದ್ದಾನೆ.
ಹೀಗಾಗಿ ಐಶ್ವರ್ಯಾಗೆ ತೀವ್ರ ರಕ್ತಸ್ರಾವವಾಗಿದೆ. ಆಕೆ ಸ್ಥಳದಲ್ಲೇ ಪ್ರಶಾಂತ ಕಣ್ಣೆದುರು ಪ್ರಾಣ ಬಿಟ್ಟಿದ್ದಾಳೆ. ನಂತರ ಪ್ರಶಾಂತ್ ಅದೇ ಚಾಕುವಿನಿಂದ ತನ್ನ ಗಂಟಲು ಸೀಳಿಕೊಂಡು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸ್ಥಳಕ್ಕೆ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಪಿಐ ಎಸ್.ಎಸ್.ಸಿಮಾನಿ, ಎಸಿಪಿ ಸಂತೋಷ ಸತ್ಯನಾಯಕರಿಂದ ಮಾಹಿತಿ ಪಡೆದ ಡಿಸಿಪಿ ರೋಹನ್ ತನಿಖೆ ಮುಂದುವರೆಸಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.












Click it and Unblock the Notifications