ಬರ ತಾಲೂಕುಗಳಿಗೆ ಹೆಚ್ಚುವರಿ 50 ಲಕ್ಷ ಅನುದಾನ: ದೇಶಪಾಂಡೆ ಘೋಷಣೆ
ಬೆಳಗಾವಿ, ಡಿಸೆಂಬರ್ 19: ರಾಜ್ಯದಲ್ಲಿ ಈಗಾಗಲೇ ಘೋಷಣೆಯಾಗಿರುವ ನೂರು ಬರಪೀಡಿತ ತಾಲೂಕುಗಳಿಗೆ ಹೆಚ್ಚುವರಿಯಾಗಿ 50 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಹಾಗೂ ಈ ತಿಂಗಳಾಂತ್ಯದಲ್ಲಿ ಮತ್ತಷ್ಟು ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡುವುದಾಗಿ ಕಂದಾಯ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ವಿಧಾನ ಸಭೆಯಲ್ಲಿ ಬುಧವಾರ ಬರಗಾಲ ಕುರಿತಂತೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2016 ರ ಅನ್ವಯ ರಾಜ್ಯದಲ್ಲಿ ಈಗಾಗಲೇ ನೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಅಲ್ಲದೇ ಡಿಸೆಂಬರ್ 31ರ ನಂತರ ಮತ್ತಷ್ಟು ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಘೋಷಿಸಿರುವ ಬರಪೀಡಿತ ತಾಲೂಕುಗಳಿಗೆ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ತಲಾ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಆದರೂ ಬರದ ತೀಕ್ಷ್ಣತೆಯನ್ನು ಗಮನಿಸಿ ಹೆಚ್ಚುವರಿಯಾಗಿ 50 ಲಕ್ಷ ರೂ. ಬಿಡುಗಡೆ ಮಾಡಲಾಗುವುದು.
ರಾಜ್ಯದಲ್ಲಿ ಬರ ನಿರ್ವಹಣೆ ಸಂಬಂಧ ಸರ್ಕಾರ ಮುಂದಾಲೋಚನೆ ಮಾಡಿ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದೆ. ಬರಗಾಲದ ಪರಿಸ್ಥಿತಿಯನ್ನು ನಿಭಾಯಿಸುವ ಸಂಬಂಧ ಕೈಗೊಳ್ಳಬಹುದಾದ ಎಲ್ಲಾ ಕಾರ್ಯಕ್ರಮಗಳಿಗೂ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

16 ಜಿಲ್ಲೆಗಳಲ್ಲಿ ನಿರಂತರ ಬರ
ಕರ್ನಾಟಕ ರಾಜ್ಯ ಕಳೆದ 14 ವರ್ಷಗಳಲ್ಲಿ ಬರ ಪರಿಸ್ಥಿತಿ ಎದುರಿಸಿದೆ. ಭಾರತ ಸರ್ಕಾರ ದೇಶದ 24 ಜಿಲ್ಲೆಗಳಲ್ಲಿ ಕರ್ನಾಟಕದ 16 ಜಿಲ್ಲೆಗಳು ನಿರಂತರ ಬರದ ಜಿಲ್ಲೆಗಳೆಂದು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಸತತ ಬರಗಾಲ ಸ್ಥಿತಿಯಲ್ಲಿರುವ ಕರ್ನಾಟಕ ರಾಜ್ಯದಲ್ಲಿನ ಬರಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದೆ.

ಮುಂಗಾರು ಉತ್ಪಾದನೆಯಲ್ಲಿ ಕುಂಠಿತ
ಕಳೆದ ಮುಂಗಾರಿನಲ್ಲಿ ಕೊಡಗು, ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಮಾತ್ರ 804 ಮಿ.ಮೀ. ಮಳೆ ಬಿದ್ದಿದ್ದು, ಉಳಿದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ, ಕೃಷಿ ಬೆಳೆಗಳು ಸೇರಿದಂತೆ ಮುಂಗಾರು ಬೆಳೆ ಉತ್ಪಾದನೆಯಲ್ಲಿ ಕುಂಠಿತವಾಗಿದೆ ಹಾಗೂ ಸಾಕಷ್ಟು ಬೆಳೆಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಇನ್‌ಪುಟ್ ಸಬ್ಸಿಡಿ ಪರಿಹಾರಗಳನ್ನು ಈಗಾಗಲೇ ರಾಜ್ಯದ ರೈತರಿಗೆ ವಿತರಣೆ ಮಾಡಲಾಗಿದೆ.

ತಾಲೂಕುಗಳಿಗೂ ತಲಾ 25 ಲಕ್ಷ
ರಾಜ್ಯದಲ್ಲಿ ಉಲ್ಬಣಿಸಿರುವ ಬರ ಪರಿಸ್ಥಿತಿಯನ್ನು ಎಲ್ಲಾ ಇಲಾಖೆಗಳ ಸಹಕಾರದಿಂದ ನಿಭಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಲುವಾಗಿ ಏಳು ಸಚಿವ ಸಂಪುಟ ಸಭೆಗಳನ್ನು ಮಾಡಲಾಗಿದೆ. ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿಯವರು ಪತ್ರ ಬರೆದು ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಬರಗಾಲಕ್ಕೆ ತುತ್ತಾಗಿರುವ ತಾಲೂಕುಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಆದ್ಯತೆ ಮೇಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬರಪೀಡಿತ ತಾಲೂಕುಗಳೆಂದು ಘೋಷಣೆ ಆಗದ, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ತಾಲೂಕುಗಳಿಗೂ ತಲಾ 25 ಲಕ್ಷ ರೂ. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ.

17 ಜಿಲ್ಲೆಗಳ 209 ಗ್ರಾಮಗಳು
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯದ 17 ಜಿಲ್ಲೆಗಳ 209 ಗ್ರಾಮಗಳಲ್ಲಿ 409 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ 382 ಖಾಸಗಿ ಕೊಳವೆಬಾವಿ ಮಾಲೀಕರೊಂದಿಗೆ ಕುಡಿಯುವ ನೀರು ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೇ ಆಯಾ ತಾಲೂಕುಗಳಲ್ಲಿ ತಹಶೀಲ್ದಾರರ ಪಿ.ಡಿ. ಖಾತೆಗಳಲ್ಲಿ ಕನಿಷ್ಠ 10 ಲಕ್ಷ ರೂ.ಹಣ ಇಡಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.

92.62 ಟನ್ ಮೇವಿನ ಅಗತ್ಯ
ರಾಜ್ಯದಲ್ಲಿ ಜಾನುವಾರುಗಳಿಗೆ 92.62 ಟನ್ ಮೇವಿನ ಅಗತ್ಯವಿದೆ. ಈಗಾಗಲೇ ಪಶುಸಂಗೋಪನೆ ಇಲಾಖೆಯಿಂದ 15 ಕೋಟಿ ರೂ. ವೆಚ್ಚದಲ್ಲಿ ಮೇವಿನ ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ಮೇವು ಸಂಗ್ರಹಣಾ ಕೇಂದ್ರ ಹಾಗೂ ಗೋಶಾಲೆಗಳನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದ್ದು, ರಾಜ್ಯದಲ್ಲಿ 224 ಮೇವು ಸಂಗ್ರಹಣಾ ಕೇಂದ್ರಗಳು ಹಾಗೂ 294 ಗೋಶಾಲೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಅಲ್ಲದೇ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇನ್ನಿತರ ಕೆಲವು ಜಿಲ್ಲೆಗಳಲ್ಲಿ ಹಸಿರು ಮೇವು ಬೆಳೆಯಲು ಹೆಚ್ಚುವರಿಯಾಗಿ ಕಿಟ್‌ಗಳನ್ನು ವಿತರಿಸಲಾಗಿದೆ.

ಹೆಚ್ಚುವರಿ ಉದ್ಯೋಗ
ಬರಗಾಲದ ಸ್ಥಿತಿಯಲ್ಲಿ ರಾಜ್ಯದ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೆಚ್ಚುವರಿ ಉದ್ಯೋಗಗಳನ್ನು ಸೃಜಿಸಲಾಗಿದೆ.
ಪ್ರತಿ ಜಾಬ್‌ಕಾರ್ಡ್‌ದಾರರಿಗೆ ಪ್ರಸ್ತುತ ಈಗಿರುವ ವಾರ್ಷಿಕ 100 ದಿನಗಳನ್ನು ಪರಿಷ್ಕರಿಸಿ 150 ದಿನಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆಯ ಉದ್ಯೋಗಗಳನ್ನು ಸೃಜಿಸಲು ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು.

226 ಕೋಟಿ ರೂ. ಅನುದಾನ
ಬರಪೀಡಿತ ತಾಲೂಕುಗಳಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಕೈಗೊಳ್ಳುವ ಮೂಲಕ, ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲದೇ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರ ನೇತೃತ್ವದಲ್ಲಿ ಹವಾಮಾನ ನಿಗಾವಹಿಸಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 5 ಕೋಟಿಯಂತೆ ರಾಜ್ಯಾದ್ಯಂತ 226 ಕೋಟಿ ರೂ. ಅನುದಾನ ಲಭ್ಯವಿದೆ. ಈಗಾಗಲೇ ಏಪ್ರಿಲ್ ನಿಂದ ನವೆಂಬರ್ ವರೆಗೆ 142.58 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿರುವ ಅನುದಾನ 5 ರೂ. ಕೋಟಿಗಿಂತ ಕಡಿಮೆ ಇದ್ದಲ್ಲಿ ಅನುದಾನದ ಬೇಡಿಕೆಯನ್ವಯ ಮಂಜೂರಾತಿ ನೀಡಲಾಗುವುದು. ಬರಪರಿಸ್ಥಿತಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯಾವುದೇ ಹಣಕಾಸಿನ ಕೊರತೆ ಇಲ್ಲ.

ರೈತರ ಖಾತೆಗೆ ಏಳು ಲಕ್ಷ
ಈ ವರ್ಷದ ಮುಂಗಾರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ 546 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಬೆಳೆಯ ಹಾನಿ ಸಂತ್ರಸ್ಥ ರೈತರ ಖಾತೆಗೆ ಪರಿಹಾರ ಜಮಾ ಮಾಡಲಾಗುತ್ತಿದೆ. ಮುಂದಿನ ಒಂದು ವಾರದೊಳಗಾಗಿ ಜಿಲ್ಲೆಯ ಎಲ್ಲಾ ರೈತರ ಖಾತೆಗಳಲ್ಲಿ ಈ ಪರಿಹಾರ ಹಣ ಜಮಾ ಆಗಲಿದೆ. ಅಲ್ಲದೇ ಅತಿವೃಷ್ಟಿಯಿಂದ ಜೀವಹಾನಿಗೊಳಗಾದ ಸಂತ್ರಸ್ಥ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯಸರ್ಕಾರದ ಪರಿಹಾರ ಸೇರಿ ತಲಾ 7 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.

ಕೇಂದ್ರ ಸರ್ಕಾರದ ತಂಡದ ಪ್ರಶಂಸೆ
ಮುಂಗಾರಿನಲ್ಲಿ ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಸಮೀಕ್ಷೆಗೆ ಕೇಂದ್ರ ಸರ್ಕಾರದ ತಂಡ ಆಗಮಿಸಿ ಸುಮಾರು 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿತ್ತು. ಈ ಸಂದರ್ಭದಲ್ಲಿ ಅತಿವೃಷ್ಟಿ ನಿರ್ವಹಣೆಯಲ್ಲಿ ರಾಜ್ಯಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಂಡ ಪ್ರಶಂಸೆ ವ್ಯಕ್ತಪಡಿಸಿದೆ.
ಆದರೂ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜಸ್ಥಾನಗಳಿಗೆ ಹೋಲಿಸಿದರೆ ರಾಜ್ಯಸರ್ಕಾರಕ್ಕೆ ಬಿಡುಗಡೆಯಾಗಿರುವ ಮೊತ್ತ ಅತ್ಯಂತ ಕಡಿಮೆ ಇದೆ. ಈ ಸಂಬಂಧ ಮುಖ್ಯಮಂತ್ರಿಯವರು ಪ್ರಧಾನಿಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಉತ್ತರ ದೊರೆತಿದೆ. ಹೆಚ್ಚುವರಿ ಅನುದಾನ ಬಿಡುಗಡೆಯಾಗುವ ವಿಶ್ವಾಸ ಇದೆ ಎಂದು ತಿಳಿಸಿದರು.

ನಗರಾಸ್ತಿ ಮಾಲೀಕತ್ವದ ಹಕ್ಕುದಾಖಲೆ
ನಗರ ಪ್ರದೇಶದ ಪ್ರತಿಯೊಂದು ಆಸ್ತಿಯನ್ನು ಅಳತೆ ಮಾಡಿ ಮಾಲೀಕತ್ವದ ಹಕ್ಕು ದಾಖಲೆಗಳಾದ ಪ್ರಾಪರ್ಟಿ ರೆಜಿಸ್ಟ್ರೇಷನ್ ಕಾರ್ಡ್‌ಗಳನ್ನು ಸಿದ್ಧಪಡಿಸುವಂತಹ ನಗರಾಸ್ತಿ ಮಾಲೀಕತ್ವದ ಹಕ್ಕುದಾಖಲೆಗಳ ಯೋಜನೆಯಡಿಯಲ್ಲಿ ಪ್ರಸ್ತುತ ರಾಜ್ಯದ ಮೈಸೂರು, ಶಿವಮೊಗ್ಗ ಮತ್ತು ಮಂಗಳೂರು ನಗರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಆರ್.ವಿ. ದೇಶಪಾಂಡೆ ಹೇಳಿದರು.
ಪ್ರಶ್ನೋತ್ತರ ಕಲಾಪ ವೇಳೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ಅವರ ಪರವಾಗಿ ಶರಣಪ್ಪ ಮಟ್ಟೂರ ಅವರು ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆ, ಈಗಾಗಲೇ ಪ್ರಥಮ ಹಂತದಲ್ಲಿ ಬೆಂಗಳೂರು ನಗರದ 60 ವಾರ್ಡ್‌ಗಳಲ್ಲಿ ಸರ್ವೆ ಆಫ್ ಇಂಡಿಯಾದವರ ಸಹಯೋಗದಲ್ಲಿ ಡ್ರೋನ್/ಯುಎವಿ ಆಧಾರಿತ ಸರ್ವೆ ಕಾರ್ಯಕ್ಕಾಗಿ ಇಲಾಖೆಯಿಂದ ತಂಡಗಳನ್ನು ರಚಿಸಿ ಫ್ಲೈಯಿಂಗ್ ಪ್ರಾರಂಭಿಸಲಾಗಿರುತ್ತದೆ.
ಸರ್ವೆ ಆಫ್ ಇಂಡಿಯಾದವರು ಡಾಟಾ ಪ್ರೊಸೆಸಿಂಗ್ ಮಾಡಿ ಇಲಾಖೆಗೆ ಒದಗಿಸಿದ ತಕ್ಷಣ ಇಲಾಖಾ ಸಿಬ್ಬಂದಿಯ ಮೂಲಕ ಪರಿಶೀಲನಾ ಕಾರ್ಯ ಮತ್ತು ಆಸ್ತಿ ದಾಖಲೆಗಳ ಸೃಜನಾ ಕಾರ್ಯವನ್ನು ಕೈಗೊಳ್ಳಲಾಗುವುದು. ಇದೇ ರೀತಿ ಇನ್ನುಳಿದ ವಾರ್ಡ್‌ಗಳಲ್ಲಿಯೂ ಸಹ ಹಂತ ಹಂತವಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿರುತ್ತದೆ ಎಂದು ತಿಳಿಸಿದರು.
-
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
ಮಾರ್ಚ್ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 16ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ












Click it and Unblock the Notifications