KPTCL recruitment scam ಸ್ಮಾರ್ಟ್‌ವಾಚ್ ಬಳಸಿ ಅಕ್ರಮ- 9 ಮಂದಿ ಬಂಧನ
ಬೆಳಗಾವಿ, ಆಗಸ್ಟ್ 23: ಪಿಎಸ್‌ಐ ನೇಮಕಾತಿ ಅಕ್ರಮದ ಬೆನ್ನಲ್ಲೇ ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಬಯಲಾಗಿದ್ದು, ಸ್ಮಾರ್ಟ್ ವಾಚ್ ಬಳಸಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಸಿದ್ದಪ್ಪ ಮದಿಹಳ್ಳಿ, ಬೆನಚಿನಮರಡಿ ಗ್ರಾಮದ ಸಿದ್ದಪ್ಪ ಕೊತ್ತಲ, ಮಾಲದಿನ್ನಿ ಗ್ರಾಮದ ರೇಣುಕಾ ಜವಾರಿ, ಸುನೀಲ ಭಂಗಿ, ಸಂತೋಷ ವೀರನಗಡ್ಡಿ, ಬಸವಣ್ಣಿ ಡೊಣವಾಡ, ಗದಗ ಮೂಲದ ಮಾರುತಿ ಸೋನವಣಿ, ಸಮೀತ್ ಕುಮಾರ್ ಸೋನವಣಿ ಹಾಗೂ ಅಮರೇಶ ರಾಜೂರ ಎಂಬುವವರನ್ನು ಬಂಧಿಸಲಾಗಿದೆ.
ಆಗಸ್ಟ್ 7ರಂದು ನಡೆದಿದ್ದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆ ನಡೆದಿದ್ದು, ಗೋಕಾಕ್ನ ಜಿ.ಎಸ್.ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸ್ಮಾರ್ಟ್ ವಾಚ್ ಬಳಸಿ ಅಕ್ರಮ ಎಸಗಿದ್ದ ಆರೋಪದಡಿ ಸಿದ್ದಪ್ಪ ಮದಿಹಳ್ಳಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಬಂಧಿತ ಆರೋಪಿ ಸಿದ್ದಪ್ಪ ಮದಿಹಳ್ಳಿ ಸ್ಮಾರ್ಟ್ ವಾಚ್ ಬಳಸಿ ಪ್ರಶ್ನೆ ಪತ್ರಿಕೆ ಫೋಟೋ ತೆಗೆದು ಟೆಲಿಗ್ರಾಂ ಆ್ಯಪ್ ಮೂಲಕ ಮತ್ತೊಬ್ಬ ಆರೋಪಿ ಸುನೀಲ್ ಭಂಗಿ ಎಂಬುವವರಿಗೆ ರವಾನಿಸಿದ್ದನು. ಈ ದೃಶ್ತಗಳು ಪರೀಕ್ಷಾ ಕೇಂದ್ರ ಸಿಸಿ ಕ್ಯಾಮರಾದಲ್ಲಿ ಗಮನಿಸಿದ ಪರೀಕ್ಷಾ ಕೇಂದ್ರದ ಸಿಬ್ಬಂದಿ ಆಗಸ್ಟ್ 9ರಂದು ಗೋಕಾಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು ಮೊದಲಿಗೆ ಸಿದ್ದಪ್ಪ ಮದಿಹಳ್ಳಿಯನ್ನು ಎಂಬಾತನನ್ನು ಬಂಧಿಸಿದ್ದರು. ಬಳಿಕ ತೀವ್ರ ವಿಚಾರಣೆ ನಡೆಸಿದಾಗ ಪ್ರಶ್ನೆ ಪತ್ರಿಕೆಯನ್ನು ಸುನೀಲ್ ಭಂಗಿ ಎಂಬುವವನಿಗೆ ಕಳುಹಿಸಿದ್ದರ ಬಗ್ಗೆ ಅಭ್ಯರ್ಥಿ ಮಾಹಿತಿ ನೀಡಿದ್ದಾನೆ.
ನಂತರ ಗೋಕಾಕ್ ಪೊಲೀಸರು ಹುಕ್ಕೇರಿ ತಾಲೂಕಿನ ಬಿ.ಕೆ.ಶಿರಹಟ್ಟಿ ಗ್ರಾಮದ ತೋಟದ ಮನೆಯ ಮೇಲೆ ಪೊಲೀಸರು ದಾಳಿ ಮಾಡಿ ಸುನಿಲ್‌ನನ್ನು ಬಂಧಿಸಿದ್ದಾರೆ. ತೀವ್ರ ವಿಚಾರಣೆಯ ನಂತರ ಸುನಿಲ್ ಭಂಗಿ ಮನೆಯಿಂದಲೇ ಕುಳಿತು ಬ್ಲೂಟೂತ್ನಲ್ಲಿ ಹಲವರಿಗೆ ಉತ್ತರ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ.

ಗದಗದಲ್ಲಿ ಇಬ್ಬರ ಬಂಧನ
ಗದಗ ನಗರಸಭೆ ಪಿಯು ಕಾಲೇಜಿನ ಕೇಂದ್ರದಿಂದಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಪೊಲೀಸರು ಗದಗ ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನವಣಿ ಮತ್ತು ಇವರ ಮಗ ಸಮೀತಕುಮಾರ್ ಸೋನವಣಿಯನ್ನು ಬಂಧಿಸಿ ಬೆಳಗಾವಿಗೆ ಕರೆತಂದಿದ್ದಾರೆ. ಇವರಿಬ್ಬರ ಮೇಲೂ ಪರೀಕ್ಷೆ ನಡೆತುವ ವೇಳೆ ಅಭ್ಯರ್ಥಿಗಳಿಗೆ ಬ್ಲೂ ಟೂತ್ ಮೂಲಕವೇ ಉತ್ತರ ಹೇಳಿರುವ ಆರೋಪವಿದೆ.
ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣ ಬೆನ್ನತ್ತಿರುವ ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ್ ನೇತೃತ್ವದ ತಂಡ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ, ಪರೀಕ್ಷಾ ಪ್ರಾಧಿಕಾರಕ್ಕೆ ಸಮಗ್ರ ವರದಿ ಸಲ್ಲಿಸಲು ನಿರ್ಧರಿಸಿದೆ. ಕೆಪಿಟಿಸಿಎಲ್ ಪರೀಕ್ಷೆ ಅಕ್ರಮದಲ್ಲಿ 13 ಜನ ಅಭ್ಯರ್ಥಿಗಳು ಉತ್ತರ ಬರೆದಿರುವ ಮಾಹಿತಿ ಇದೆ.
ಪ್ರಕರಣದ ಹಿನ್ನೆಲೆ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಕ್ರಮಕ್ಕೆ ಸಂಬಂಧಿಸಿದಂತೆ ಗದಗದ ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಹಾಗೂ ಅವರ ಪುತ್ರನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಪ್ರಾಚಾರ್ಯರ ಮಗ ಪತ್ರಕರ್ತನ ಸೋಗಿನಲ್ಲಿ ಕಾಲೇಜಿಗೆ ಹೋಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾನೆ. ಆ ಬಳಿಕ ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳಿಗೆ ಉತ್ತರಗಳನ್ನು ಲೀಕ್ ಮಾಡಿದ ಗಂಭೀರ ಅರೋಪ ಕೇಳಿ ಬಂದಿದ್ದು,ಈ ಅಕ್ರಮದಲ್ಲಿ ಅಭ್ಯರ್ಥಿಗಳು ಸೇರಿದಂತೆ ದೊಡ್ಡ ಕಿಂಗ್ ಪಿನ್ ಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ. ಈ ಪ್ರಕರಣದಲ್ಲೂ ದೊಡ್ಡ ದೊಡ್ಡವರು ಶಾಮೀಲಾಗಿದ್ದು, 300 ಕೋಟಿ ರೂ.ಗೂ ಅಧಿಕ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಸಹ ಇದೇ ಆರೋಪ ಮಾಡಿದ್ದಾರೆ.












Click it and Unblock the Notifications