ಉತ್ತರ ಕರ್ನಾಟಕಕ್ಕೆ ಸ್ಥಳಾಂತರವಾಗಲಿರುವ ಸರ್ಕಾರಿ ಕಚೇರಿಗಳ ಪಟ್ಟಿ
ಬೆಳಗಾವಿ, ಡಿಸೆಂಬರ್ 20 : ಉತ್ತರ ಕರ್ನಾಟಕ ಭಾಗದ ಜನರ ಬೇಡಿಕೆಗೆ ಸ್ಪಂದಿಸಿರುವ ಕರ್ನಾಟ ಸರ್ಕಾರ 9 ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡುವ ತೀರ್ಮಾನ ಕೈಗೊಂಡಿದೆ. ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಕಚೇರಿಗಳು ಸ್ಥಳಾಂತರವಾಗಲಿವೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಯಾವ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು? ಎಂದು ತೀರ್ಮಾನಿಸಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಇತ್ತೀಚೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿಯ ಅನ್ವಯ ಸರ್ಕಾರ ಅಂತಿಮ ತೀರ್ಮಾನವನ್ನು ಕೈಗೊಂಡಿದೆ.
ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡಲು ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿಗಳ ಒಪ್ಪಿಗೆ ಬೇಕು. ಅವರ ಒಪ್ಪಿಗೆ ಪಡೆದ ಬಳಿಕ ಸ್ಥಳಾಂತರ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಸ್ಥಳಾಂತರವಾಗುವ ಕಚೇರಿ ವಿವರ ಇಲ್ಲಿದೆ..

ಯಾವ-ಯಾವ ಕಚೇರಿಗಳು
* ಕೃಷ್ಣ ಭಾಗ್ಯ ಜಲ ನಿಗಮ
* ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿ ಹಾಗೂ ನೋಂದಾಯಿತ ಕಚೇರಿ
* ಕರ್ನಾಟಕ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ
* ಸಕ್ಕರೆ ಅಭಿವೃದ್ಧಿ ನಿರ್ದೇಶನಾಲಯ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ

ಮಂಡಳಿ ವಿಭಜನೆ ಮಾಡಲು ತೀರ್ಮಾನ
* ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಇದನ್ನು ವಿಭಜನೆ ಮಾಡಿ, ಉತ್ತರ ಕರ್ನಾಟಕ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಸ್ಥಾಪನೆ
*ಕರ್ನಾಟಕ ಮಾನವ ಹಕ್ಕು ಆಯೋಗದ ಒಬ್ಬರು ಸದಸ್ಯರ ಕಚೇರಿ ಸ್ಥಳಾಂತರ
* ಇಬ್ಬರು ಮಾಹಿತಿ ಹಕ್ಕು ಆಯುಕ್ತರ ಕಚೇರಿ

ಮೈಸೂರಿನಿಂದ ಬೆಳಗಾವಿ
* ಮೈಸೂರಿನಲ್ಲಿರುವ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಯ ನಿರ್ದೇಶನಾಲಯ
* ಇಬ್ಬರು ಉಪ ಲೋಕಾಯುಕ್ತರ ಪೈಕಿ ಒಂದು ಕಚೇರಿ ಸ್ಥಳಾಂತರ

ಕೆಎಟಿ ಪೀಠ ಆರಂಭ
ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ ಪೀಠವನ್ನು ಬೆಳಗಾವಿಯಲ್ಲಿ ಈಗಾಲೇ ಸ್ಥಾಪನೆ ಮಾಡಲಾಗಿದೆ. ಡಿಸೆಂಬರ್ 17ರಂದು ಪೀಠ ಲೋಕಾರ್ಪಣೆಗೊಂಡಿದೆ. ಬೆಳಗಾವಿ ಕೆಎಟಿ ಪೀಠದ ವ್ಯಾಪ್ತಿಗೆ ಬೀದರ್, ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳು ಸೇರಿವೆ.












Click it and Unblock the Notifications