ಬೆಳಗಾವಿಯಲ್ಲಿ ಬುಧವಾರ 6ನೇ ವಿಶ್ವಕರ್ಮ ಜಯಂತಿ
ಬೆಳಗಾವಿ, ಸೆ. 16 : ಗಡಿನಾಡು ಬೆಳಗಾವಿಯಲ್ಲಿ ಬುಧವಾರ ಆರನೇ ವಿಶ್ವಕರ್ಮ ಜಯಂತಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಪಕ್ಷದ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸುಮಾರು 2 ಲಕ್ಷ ಜನರು ಕಾರ್ಯಕ್ರಮವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ನಗರದ ಧಾರವಾಡ ರಸ್ತೆಯ ಎಸ್.ಸಿ. ಮೋಟಾರ್ ಬಳಿಯ ವಿಶಾಲ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಡಿ ಹೇಳಿದ್ದಾರೆ. ಕಾರ್ಯಕ್ರಮಕ್ಕಾಗಿ 15 ಎಕರೆ ಪ್ರದೇಶದಲ್ಲಿ ಪೆಂಡಾಲ್ ನಿರ್ಮಿಸಲಾಗಿದ್ದು, ಸುಮಾರು 2 ಲಕ್ಷ ಜನರು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಮಾಜದ ಬಾಂಧವರು ಬಡತನದಲ್ಲಿದ್ದಾರೆ. ಅವರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ಅರಿವು ಇಲ್ಲ. ಅವರಲ್ಲಿ ಜಾಗೃತಿ ಮೂಡಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ಕೆ.ಪಿ.ನಂಜುಡಿ ಹೇಳಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. [ಬೆಳಗಾವಿಯಲ್ಲಿ ಸೆ.17ರಂದು ವಿಶ್ವಕರ್ಮ ಜಯಂತಿ]
ಬೆಳಗ್ಗೆ 11 ಗಂಟೆಗೆ 250 ಕೆ.ಜಿ ಪಂಚಲೋಹದ ವಿಶ್ವಕರ್ಮ ಮೂರ್ತಿಯ ಮೆರಮಣಿಗೆ ಆರಂಭವಾಗಲಿದ್ದು, ಬೆಂಗಳೂರಿನಿಂದ ಆಗಮಿಸಲಿರುವ ಸುಮಾರು 500 ಯುವಕರು ಬೈಕ್ ಜಾಥಾ ಮೂಲಕ ಮೆರಮಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಪಕ್ಷಾತೀತವಾಗಿ ಎಲ್ಲಾ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವ ನಿರೀಕ್ಷೆ ಇದೆ.
ಬೆಳಗಾವಿ ನಗರದಿಂದ ಸಮಾವೇಶ ನಡೆಯಲಿರುವ ಸ್ಥಳಕ್ಕೆ ತೆರಳು 25 ಬಸ್ ವ್ಯವಸ್ಥೆ ಮಾಡಲಾಗಿದೆ. ವಿಶ್ವಕರ್ಮ ಸಮಾಜದ ಒಂದು ಸಾವಿರ ಸ್ವಯಂ ಸೇವಕರು ಊಟ, ವಾಹನ ನಿಲುಗಡೆ ಮುಂತಾದ ಕಾರ್ಯಕಮಗಳ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.
ಸಮಾವೇಶದಲ್ಲಿ ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ವಿಶ್ವಕರ್ಮ ಜಯಂತಿ ಅಂಗವಾಗಿ ಸೆ.17ರಂದು ಸರ್ಕಾರಿ ರಜೆ ಘೋಷಿಸಬೇಕು, ಚಿನ್ನ-ಬೆಳ್ಳಿ ಕೆಲಸಗಾರರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ತಡೆಯಬೇಕು, ಸಮಾಜಕ್ಕೆ ರಾಜಕೀಯ ಶಕ್ತಿ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.












Click it and Unblock the Notifications