ಬೆಂ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ನಿಲೇಕಣಿ ಆಸ್ತಿ ಎಷ್ಟು ಗೊತ್ತಾ?
ಬೆಂಗಳೂರು, ಮಾರ್ಚ್ 21: ಬೆಂಗಳೂರು ದಕ್ಷಿಣ ಕ್ಷೇತ್ರದ high-profile ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರ ಆಸ್ತಿ ತುಂಬಾ ತುಂಬಾ ಇದೆ! ಇಂದು ಶುಕ್ರವಾರ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ಅವರು ಸಾರ್ವಜನಿಕವಾಗಿ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನ ಕಲ್ಪಿಸಿದ ಐಟಿ ದೊರೆ ನಂದನ್ ನಿಲೇಕಣಿ ಅವರು ನಾಡಿನ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗುವ ಎಲ್ಲ ಲಕ್ಷಣಗಳೂ ಇವೆ. ಅಂದಹಾಗೆ, ನಿಲೇಕಣಿ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಬರೋಬ್ಬರಿ 7,700 ಕೋಟಿ ರೂ. ಆಸ್ತಿ ಇದೆ! ಅಷ್ಟೇ ಅಲ್ಲ, ಸಮಾಜ ಸೇವೆಗೆಂದು ವಿವಿಧ ಸಂಘ ಸಂಸ್ಥೆಗಳಿಗೆ 400 ಕೋಟಿ ರೂ. ದಾನ ಮಾಡಿರುವುದಾಗಿಯೂ ನಿಲೇಕಣಿ ಹೇಳಿದ್ದಾರೆ.
ಬೆವರು ಸುರಿಸಿ ಸ್ವಯಂಕೃಷಿಯಿಂದ ಸಂಪಾದಿಸಿದ್ದು:


ಅಂದಹಾಗೆ, ನಿಲೇಕಣಿ ಅವರ ಆಸ್ತಿಯಲ್ಲಿ ಹೆಚ್ಚಿನ ಪಾಲು ಅಂದರೆ ಶೇ. 80ರಷ್ಟು ಇನ್ಫೋಸಿಸ್ ಕಂಪನಿಯ ಷೇರುಗಳ ಮೂಲಕ ಬಂದಿರುವುದಾಗಿದೆ. ನಿಲೇಕಣಿ ಅವರು ಶೇ. 1.45 ರಷ್ಟು ಷೇರು ಹೊಂದಿದ್ದರೆ, ಅವರ ಪತ್ನಿ ರೋಹಿಣಿ ಅವರ ಹೆಸರಲ್ಲಿ ಶೇ. 1.3 ರಷ್ಟು ಷೇರುಗಳಿವೆ (ESOP). 'ತಮ್ಮೀ ಸಂಪಾದನೆ ಅತ್ಯಂತ ಪಾರದರ್ಶಕವಾಗಿದ್ದು, ಕದ್ದುಮುಚ್ಚಿಟ್ಟಿಲ್ಲ. ಯಾವುದೇ ಅಕ್ರಮಗಳಿಂದ ಸಂಪಾದಿಸಿದ್ದೂ ಅಲ್ಲ. ಆದಾಯಕ್ಕೆ ತಕ್ಕ ತೆರಿಗೆಯನ್ನೂ ಪಾವತಿಸುತ್ತಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಅವರು ಹೇಳಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಇನ್ಫೋಸಿಸ್ ಕಂಪನಿ ಸ್ಥಾಪನೆಯಿಂದ ಬಂದ ಈ ಹಣದಿಂದ ನನಗೆ ಆರ್ಥಿಕ ಸ್ವಾತಂತ್ರ್ಯ ದಕ್ಕಿದ ತೃಪ್ತಿಯಿದೆ. ಇನ್ಫೋಸಿಸ್ ಕಂಪನಿಕಯು ಸಾವಿರಾರು ಮಂದಿಗೆ ಸ್ವಯಂಕೃಷಿ ಕೈಗೊಳ್ಳಲು ಉತ್ತೇಜನಕಾರಿಯಾಗಿದೆ. ನಾನು ಈ ಹಣದಿಂದ ಲಕ್ಷಾಂತರ ಮಂದಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಬೇಕೆಂದು ಬಯಸಿರುವುದಾಗಿ ಅವರು ಹೇಳಿದರು.












Click it and Unblock the Notifications