ಕೆಂಗೇರಿ ಕಬೋರ್ಡ್ ಮರ್ಡರ್ ಮಿಸ್ಟ್ರಿಗೆ ರೋಚಕ ತಿರುವು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 15: ಕೆಂಗೇರಿಯ ಮನೆಯೊಂದರ ಕಬೋರ್ಡ್ ನಲ್ಲಿ ಪತ್ತೆಯಾದ ಅಸ್ಥಿಪಂಜರದ ಕುರಿತು ತನಿಖೆ ನಡೆಸುತ್ತಿದ್ದ ಬೆಂಗಳೂರು ಪೊಲೀಸರಿಗೆ ಮತ್ತಷ್ಟು ರೋಚಕ ಮಾಹಿತಿಗಳು ಲಭ್ಯವಾಗಿವೆ.

ಇದುವರೆಗೂ ಅಂದುಕೊಂಡಂತೆ, ಕಬೋರ್ಡಿನಲ್ಲಿ ಅಸ್ಥಿಪಂಜರವಾಗಿ ಪತ್ತೆಯಾದ ವೃದ್ಧೆ ಶಾಂತಕುಮಾರಿಯವರ ಕೊಲೆಗೆ ಆಕೆಯ ಮೊಮ್ಮಗ ಸಂಜಯ ಕಾರಣವಲ್ಲ, ಬದಲಾಗಿ ಆತನ ತಾಯಿ ಶಶಿಕಲಾ ಅವರೇ ತಮ್ಮ ತಾಯಿಯನ್ನು ಸಾಯಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಸಂಜಯ್ ಸ್ನೇಹಿತ ನಂದೀಶ್ ಎನ್ನುವವರು ನೀಡಿದ್ದಾರೆ.[ಬೆಂಗಳೂರು: ಅಜ್ಜಿಯನ್ನು ಕೊಂದು 7 ತಿಂಗಳು ಕಬೋರ್ಡಿನಲ್ಲಿಟ್ಟದ್ದ ಮೊಮ್ಮಗ!]

ಘಟನೆಯ ಹಿನ್ನಲೆ
ಹೊಟೇಲಿನಿಂದ ತರಿಸಿದ್ದ ತಿಂಡಿಯನ್ನು ತಿನ್ನಲೊಲ್ಲೆ ಎಂದ ಅಮ್ಮ ಶಾಂತಕುಮಾರಿಗೆ, ಮಗಳು ಶಶಿಕಲಾ ಲಟ್ಟಣಿಗೆಯಿಂದ ಹೊಡೆದಿದ್ದಾಳೆ. ಸುಮಾರು 70 ವರ್ಷದ ವೃದ್ಧೆಗೆ ಆ ಪೆಟ್ಟನ್ನು ತಾಳಲಾಗಿಲ್ಲ. ಅವರು ತಕ್ಷಣವೇ ತೀವ್ರ ರಕ್ತಸ್ರಾವದಿಂದ ಕೆಳಕ್ಕುರುಳಿದ್ದಾರೆ. ಇದರಿಂದ ಆತಂಕಗೊಂಡ ಮಗಳು ಶಶಿಕಲಾ, ಮತ್ತು ಇಂಜಿನಿಯರಿಂಗ್ ಓದುತ್ತಿದ್ದ ಶಶಿಕಲಾ ಮಗ ಸಂಜಯ್, ವೃದ್ಧೆಯನ್ನು ಆಸ್ಪತ್ರೆಗೆ ಕಳಿಸಿದರೆ ಪೊಲೀಸ್ ಕೇಸಾಗುತ್ತದೆಂದು ಹೆದರಿ, ಸುಮ್ಮನಿದ್ದಾರೆ.

Kengeri cupboard murder mystry takes new twist now

ಅಷ್ಟರಲ್ಲಾಗಲೇ ವೃದ್ಧೆ ತೀರಿಹೋಗಿದ್ದಾರೆ. ಆಕೆಯ ಶವವನ್ನು ತಮ್ಮ ಮೂಲ ಊರಾದ ಶಿವಮೊಗ್ಗ ಬಳಿಯ ಸಾಗರಕ್ಕೆ ರವಾನಿಸಬೇಕೆಂದುಕೊಂಡಿದ್ದ ತಾಯಿ-ಮಗನಿಗೆ ಬೇರೆ ಬೇರೆ ಕಾರಣಗಳಿಂದ ಶವವನ್ನು ಸಾಗಿಸುವುದಕ್ಕೆ ಸಾಧ್ಯವಾಗಿಲ್ಲ. ಅಂಗಡಿಯಿಂದ ನೀಲಿ ಬಣ್ಣದ ಟಬ್ ವೊಂದನ್ನು ತಂದು ಹೆಣವನ್ನು ಅದರಲ್ಲಿರಿಸಿದ್ದಾರೆ.

ಒಂದೇ ದಿನದಲ್ಲಿ ಶವ ದುರ್ನಾತ ಬೀರುವುದಕ್ಕೆ ಶುರುವಾಗುತ್ತಿದ್ದಂತೆಯೇ ಶವವನ್ನು ಕಬೋರ್ಡಿನಲ್ಲಿಟ್ಟು, ಅದಕ್ಕೊಂದಷ್ಟು ರಾಸಾಯನಿಕ ಸಿಂಪಡಿಸಿ ವಾಸನೆ ಬಾರದಂತೆ ಮಾಡಿದ್ದಾರೆ. ನಂತರ ವಾರ್ಡ್ ರೋಬ್ ಗೆ ಸಿಮೆಂಟಿನಿಂದ ಕವರ್ ಮಾಡಿದ್ದಾರೆ. ಕಳೆದ ವರ್ಷದ ಆಗಸ್ಟ್ ನಿಂದ ಮೇ, 7, 2017ರವರೆಗೂ ವೃದ್ಧೆಯ ಹೆಣ ಆ ವಾರ್ಡ್ ರೋಬಿನಲ್ಲೇ ಇತ್ತು!

ಶವವನ್ನು ಬೇರೆಡೆ ರವಾನಿಸುವುದಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದ ಸಂಜಯ್ ಸ್ನೇಹಿತ ನಂದೀಶ್ ಎನ್ನುವವರನ್ನು ಬಂಧಿಸಲಾಗಿದೆ. ಕೊಲೆಯ ಕುರಿತು ಅವರೇ ಪೊಲೀಸರಿಗೆ ಹೆಚ್ಚಿನ ಮಾಹಿತಿ ನೀಡುತ್ತಿದ್ದಾರೆ.

ಅಜ್ಜಿ ಕಾಣಿಸುತ್ತಿಲ್ಲ ಎಂದು ಅಕ್ಕ-ಪಕ್ಕದವರು ಕೇಳಿದರೆ ಅವರು ಊರಿಗೆ ಹೋಗಿದ್ದಾರೆಂದೇ ತಾಯಿ-ಮಗ ಹೇಳುತ್ತಿದ್ದರು. ವಿಚ್ಛೇದನ ಪಡೆದಿದ್ದ ಶಶಿಕಲಾ ತಮ್ಮ ಮಗ ಸಂಜಯ್ ಜೊತೆಯಲ್ಲೇ ವಾಸವಾಗಿದ್ದರು.

ಇತ್ತೀಚೆಗಷ್ಟೇ ತಾವು ಮನೆ ಖಾಲಿ ಮಾಡುತ್ತಿದ್ದೇವೆಂದು ಮನೆ ಮಾಲೀಕ ನವೀನ್ ಗೆ ತಿಳಿಸಿದ್ದ ಸಂಜಯ್ ಅವರಿಂದ ಅಡ್ವಾನ್ಸ್ ಹಿಂಪಡೆದು, ಮನೆ ಖಾಲಿಮಾಡಿಕೊಂಡು ಹೋಗಿದ್ದ. ಬೇರೊಬ್ಬ ಬಾಡಿಗೆದಾರನಿಗ ಮನೆ ಬಾಡಿಗೆ ನೀಡುವ ಸಮಯದಲ್ಲಿಕಬೋರ್ಡ್ ತೆರೆದ ಮಾಲೀಕರಿಗೆ ವಾರ್ಡ್ ರೋಬಿನಲ್ಲಿ ತಮ್ಮ ಅನುಮತಿಯಿಲ್ಲದೆ ಕೆಲ ಮಾರ್ಪಾಡು ಮಾಡಿರುವುದು ಗಮನಕ್ಕೆ ಬಂದಿದೆ.

ಸಂಜಯ್ ಗೆ ಫೊನ್ ಮಾಡಿದರೆ ಅತ್ತೆಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದರುವುದನ್ನು ಕಂಡು ಏನೋ ಅಚಾತುರ್ಯ ನಡೆದಿದೆ ಎಂಬ ಸೂಚನೆ ಮಾಲೀಕರಿಗೆ ಸಿಕ್ಕಿದೆ. ತಕ್ಷಣವೇ ಎಚ್ಚೆತ್ತುಕೊಂಡ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಂದು ಸಿಮೆಂಟ್ ಕವರಿಂಗ್ ಒಡೆದು ನೋಡಿದಾಗ ವೃದ್ಧೆಯ ಅಸ್ತಿಪಂಜರ ದೊರಕಿದೆ.

ಇದೀಗ ಸಂಜಯ್ ಮತ್ತು ಶಶಿಕಲಾ ಇಬ್ಬರೂ ತಲೆಮರೆಸಿಕೊಂಡಿದ್ದು, ಉತ್ತರ ಭಾರತದ ಕಡೆ ಹೋಗಿರಬಹುದೆಂದು ಶಂಕಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kengeri cupboard murder mystry takes new twist now. The old woman Shanthakumari was allegedly killed by her daughter and not the grandson as was initially believed, police said.
Please Wait while comments are loading...