ಬೆಂಗಳೂರಿನಲ್ಲಿ ಶನಿವಾರ ಸಂಜೆ ಮಾಯದಂಥ ಮಳೆ
ಬೆಂಗಳೂರು, ಮೇ 27 : ಬೆಂಗಳೂರಿನಲ್ಲಿ ಶನಿವಾರ ಸಂಜೆ ಮಾಯದಂಥ ಮಳೆ. ರಸ್ತೆಗಳು ಹೊಳೆಗಳಂತಾಗಿವೆ, ಹೋಟೆಲು, ಮನೆಗಳು, ವಾಹನಗಳು ತೇಲಾಡುವಂತಾಗಿದೆ. ಶುಕ್ರವಾರ ಸುರಿದಂಥ ಮಳೆಯನ್ನೂ ಮೀರಿಸಿ ಶನಿವಾರದ ಮಳೆ ಭಾರೀ ಆವಾಂತರ ಸೃಷ್ಟಿಸಿದೆ.
ಸಂಜೆ 5.30ರ ಸಮಯದಲ್ಲಿ ಆಗಸದಲ್ಲಿ ಸೂರ್ಯ ಇನ್ನೂ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗಲೇ ಆರಂಭವಾದ ಮಳೆ ರಾತ್ರಿ 10.15 ಆದರೂ ನಿಂತಿಲ್ಲ. 7 ಗಂಟೆಯ ಸುಮಾರಿಗೆ ಮತ್ತೆ ತನ್ನ ಆರ್ಭಟ ಆರಂಭಿಸಿದ ಮಳೆ ನಿರಂತರವಾಗಿ ಸುರಿಯುತ್ತಿದೆ.
ನಾಯಂಡಹಳ್ಳಿಯಲ್ಲಿ ರಾಜಾ ಕಾಲುವೆ ತುಂಬಿ ಹರಿಯುತ್ತಿದ್ದು, ವಾಹನ ಸಂಚಾರ ನಿಂತ ನೀರಂತಾಗಿದೆ. ಸೊಂಟದೆತ್ತರ ಹರಿಯುತ್ತಿರುವ ನೀರಿನಲ್ಲಿ ವಾಹನ ತಳ್ಳಿಕೊಂಡು ಜನರು ಸಾಗಲು ಪರದಾಡುತ್ತಿದ್ದಾರೆ. ಶಿವಾನಂದ ಸರ್ಕಲ್ ನಲ್ಲಿ ಮಳೆ ನೀರು ಹೋಟೆಲುಗಳಲ್ಲಿ ನುಗ್ಗಿದ್ದರಿಂದ ಪಾತ್ರೆಗಳು ನೀರಿನಲ್ಲಿ ತೇಲಾಡುತ್ತಿವೆ. [ಮಳೆಗೆ ಬೆಚ್ಚಿದ ಬೆಂಗಳೂರಿಗರಿಗೆ ಬೆಸ್ಕಾಂ ಸಹಾಯವಾಣಿಗಳು!]

ಕಸ್ತೂರಬಾ ರಸ್ತೆಯಲ್ಲಿ ಭಾರೀ ಗಾಳಿಗೆ ಬೃಹತ್ ಮರವೊಂದು ಬಿದ್ದು ವಾಹನ ನಜ್ಜುಗುಜ್ಜಾಗಿದೆ. ಹೆಬ್ಬಾಳದಲ್ಲಿ ಕೂಡ ದೊಡ್ಡ ಮರವೊಂದು ಮನೆಯ ಮೇಲೆ ಬಿದ್ದಿದ್ದರಿಂದ ಮನೆಗೆ ಹಾನಿಯಾಗಿದೆ. ಬನ್ನೇರುಘಟ್ಟದಲ್ಲಿಯೂ ಬೃಹತ್ ಮರ ಬಿದ್ದು ಮಾರುತಿ ಸ್ವಿಫ್ಟ್ ಕಾರಿಗೆ ಹಾನಿಯಾಗಿದೆ.
ಪ್ರಕೃತಿ ವಿರೋಪ ನಿರ್ವಹಣಾ ಸಮಿತಿ ನೀಡಿರುವ ಅಂಕಿಸಂಖ್ಯೆಗಳ ಪ್ರಕಾರ, ಜಾಲದಲ್ಲಿ 14 ಸೆಂ.ಮೀ, ಯಲಹಂಕದಲ್ಲಿ 9 ಸೆಂಮೀ, ವಿದ್ಯಾಪೀಠದಲ್ಲಿ 11 ಸೆಂ.ಮೀ, ಕೋಣನಕುಂಟೆಯಲ್ಲಿ 6 ಸೆಂ.ಮೀ, ಬೆಳ್ಳಂದೂರು ಬ್ಯಾಟರಾಯನಪುರದಲ್ಲಿ 6 ಸೆಂ.ಮೀ. ಮಳೆ ಸುರಿದಿದೆ.












Click it and Unblock the Notifications