ಬಿಲ್ಡರ್ ಅಪಹರಿಸಿ ಹಣಗಳಿಸುವ ಸಂಚು ವಿಫಲ
ಬೆಂಗಳೂರು, ಜೂ. 24 : ಉದ್ಯಮಿಯೊಬ್ಬರನ್ನು ಅಪಹರಿಸಿದ ಏಳು ಜನರ ತಂಡ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೊದಲು 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು ನಂತರ ಉದ್ಯಮಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾದವರನ್ನು ಕುಮಾರಸ್ವಾಮಿ ಲೇಔಟ್‌ನ ನಿವಾಸಿ ವಿನೋದ್ ರಾಮಸ್ವಾಮಿ ಎಂದು ಗುರುತಿಸಲಾಗಿದ್ದು, ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಲ್ಡರ್ ಆಗಿರುವ ವಿನೋದ್ ಅವರನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಅಪಹರಣ ಮಾಡಿದ್ದರು.

ಘಟನೆ ವಿವರ : ಸೋಮವಾರ ರಾತ್ರಿ ವಿನೋದ್ ತಂಗಿಯನ್ನು ರೈಲು ನಿಲ್ದಾಣಕ್ಕೆ ತಮ್ಮ ಇನೋವಾ ಕಾರಿನಲ್ಲಿ ಬಿಟ್ಟು ಚಾಲಕನೊಂದಿಗೆ ವಾಪಸ್ ಬರುವಾಗ ಉತ್ತರಹಳ್ಳಿ ಬಳಿಯ ರೋಟಿಘರ್ ಹೊಟೇಲ್ ನಲ್ಲಿ ತಿಂಡಿ ಖರೀದಿಸಲು ಕಾರಿನಿಂದ ಇಳಿದಿದ್ದಾರೆ. [15 ಕಳ್ಳರ ಬಂಧನ - 76 ಲಕ್ಷ ಜಪ್ತಿ]
ಆಗ ಏಳು ಜನರ ತಂಡ ಕಾರಿಗೆ ಹತ್ತಿದ್ದು, ವಿನೋದ್ ಅವರನ್ನು ಅಪಹರಿಸಿದ್ದಾರೆ. ರಾತ್ರಿ ಪೂರ್ತಿ ನಗರದಲ್ಲಿ ಸಂಚರಿಸಿದ ಅಪಹರಣಕಾರರರು, ವಿನೋದ್ ಬಿಡುಗಡೆಗಾಗಿ 20 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಮನೆಗೆ ಬಂದರೆ ಹಣ ಕೊಡುವುದಾಗಿ ವಿನೋದ್ ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಕುಮಾರಸ್ವಾಮಿ ಲೇಔಟ್ ನ ಮನೆಯ ಬಳಿ ಬಂದಿದ್ದಾರೆ.
ವಿನೋದ್ ಮನೆಯ ಬಳಿ ಬರುತ್ತಿದ್ದಂತೆ ಅವರ ತಂದೆ ಮತ್ತು ಕುಟುಂಬ ವರ್ಗದವರು ಗಲಾಟೆ ಮಾಡಿ, ಸ್ಥಳೀಯರನ್ನು ಕರೆದಿದ್ದಾರೆ. ಇದರಿಂದ ಆತಂಕಗೊಂಡ ಅಪಹರಣಕಾರರು ವಿನೋದ್ ಬೆನ್ನು, ಹೊಟ್ಟೆ ಮುಂತಾದ ಸ್ಥಳಗಳಿಗೆ ಚಾಕುವಿನಿಂದ ಇರಿದು ವಿನೋದ್ ಕಾರು ಚಾಲಕನೊಂದಿಗೆ ಪರಾರಿಯಾಗಿದ್ದಾರೆ.
ಚಾಕು ಇರಿತದಿಂದ ಗಾಯಗೊಂಡಿದ್ದ ವಿನೋದ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕುಟುಂಬದವರು, ಕುಮಾರಸ್ವಾಮಿ ಲೇಔಟ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ತಲಘಟ್ಟಪುರ ಬಳಿ ವಿನೋದ್ ಅವರ ಕಾರು ಮತ್ತು ಚಾಲಕ ರಾಜುವನ್ನು ಪತ್ತೆಹಚ್ಚಿದ್ದು, ಅವರ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications