ಬಳ್ಳಾರಿ: ತುಂಬಿ ಹರಿಯುತ್ತಿರುವ ನದಿಯಲ್ಲಿ ಯುವಕರ ಹುಚ್ಚಾಟ, ವಿಡಿಯೋ ವೈರಲ್
ಬಳ್ಳಾರಿ, ಸೆಪ್ಟೆಂಬರ್ 23: ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಯುವಕರು ಹುಚ್ಚಾಟ ಮಾಡಿದ್ದು, 100 ಅಡಿ ಎತ್ತರದ ಸೇತುವೆ ಮೇಲಿನಿಂದ ನದಿಗೆ ಯುವಕರು ಹಾರಿದ್ದಾರೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ದೇಶನೂರು ಗ್ರಾಮದ ಬಳಿ ಇರುವ ಸೇತುವೆಯಿಂದ ಜಿಗಿದು ನದಿಯಲ್ಲಿ ಈಜಾಡಿದ್ದಾರೆ. ತುಂಗಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಆದರೆ ಈ ಯುವಕರು ಅಪಾಯ ಲೆಕ್ಕಿಸದೇ ಸುಮಾರು 100 ಅಡಿ ಎತ್ತರದ ಸೇತುವೆಯಿಂದ ನದಿಗೆ ಹಾರಿ ಹುಚ್ಚಾಟ ಮಾಡಿದ್ದಾರೆ. ನೀರಿನ ರಭಸದಲ್ಲಿ ಒಂದು ಕ್ಷಣ ಮೈಮರೆತರೂ ನದಿಯಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ.

ಆದರೂ ಇದನ್ನು ಲೆಕ್ಕಿಸದೇ ಯುವಕರು ನದಿಗೆ ಹಾರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಸೇತುವೆ ಬಳಿ ಪೊಲೀಸರನ್ನು ನಿಯೋಜಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು ತುಂಗಭದ್ರಾ ಜಲಾಶಯದ ಒಳಹರಿವು ಹಾಗೂ ಹೊರಹರಿವು ಪ್ರಮಾಣವೂ ತಗ್ಗಿದ್ದು, ಮುಳುಗಡೆಯಾಗಿದ್ದ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಜಲಾಶಯದಿಂದ ನದಿಗೆ 74,016 ಕ್ಯೂಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ. ಎರಡು ಅಡಿ ಎತ್ತರದಲ್ಲಿ 20 ಕ್ರಸ್ಟ್ ಗೇಟ್ ಹಾಗೂ ಒಂದು ಅಡಿ ಎತ್ತರದಲ್ಲಿ 8 ಕ್ರಸ್ಟ್ ಗೇಟ್ ಮೂಲಕ ನೀರನ್ನು ಹರಿಸಲಾಗುತ್ತಿದೆ.

ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ 8,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ಜಲಾಶಯಕ್ಕೆ 1,13,600 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದು ಒಟ್ಟು 1631.76 ಅಡಿ ಇದ್ದು, 96.122 ಟಿಎಂಸಿ ನೀರು ಸಂಗ್ರಹವಾಗಿದೆ.












Click it and Unblock the Notifications